ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ವಿವಿಧ ನಗರಗಳ ವಾಯು ಗುಣಮಟ್ಟದಲ್ಲಿ ಕಳೆದ ಕೆಲವು ದಿನಗಳಿಂದ ತೀವ್ರ ಏರುಪೇರು ಕಂಡುಬರುತ್ತಿದೆ. ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಸದಾ ಮಾಲಿನ್ಯದ ದೂರು ಕೇಳಿಬರುತ್ತಿದ್ದ ಬೆಂಗಳೂರಿನಲ್ಲಿ ವಾಯು ಗುಣಮಟ್ಟ ತುಸು ಸುಧಾರಿಸಿದ್ದರೆ, ಪ್ರಕೃತಿಯ ಮಡಿಲಿನಂತಿದ್ದ ಮಂಗಳೂರು ಮತ್ತು ಉಡುಪಿ ನಗರಗಳಲ್ಲಿ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿಯುತ್ತಿದೆ.
ಕೆಲವೇ ದಿನಗಳ ಹಿಂದೆ ಅಪಾಯಕಾರಿ ಮಟ್ಟಕ್ಕೆ ತಲುಪಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂಡೆಕ್ಸ್ ಇಂದು 127ಕ್ಕೆ ತಲುಪುವ ಮೂಲಕ ಸುಧಾರಣೆ ಕಂಡಿದೆ. ಇದು ಸಮಾಧಾನಕರ ಸಂಗತಿಯಾದರೂ, ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯೂ ಸಹ ಆರೋಗ್ಯಕ್ಕೆ ಪೂರಕವಲ್ಲ ಎಂಬುದು ಗಮನಾರ್ಹ.
ಸದ್ಯದ ಕಳವಳಕಾರಿ ವಿಷಯವೆಂದರೆ ಮಂಗಳೂರು ಮತ್ತು ಉಡುಪಿಯ ಪರಿಸ್ಥಿತಿ. ಮೂರು ದಿನಗಳ ಹಿಂದೆ 100ರ ಆಸುಪಾಸಿನಲ್ಲಿದ್ದ ಮಂಗಳೂರಿನ AQI, ಇಂದು ದಿಢೀರನೆ 172ಕ್ಕೆ ಏರಿಕೆಯಾಗಿದೆ. ಕೈಗಾರಿಕಾ ಚಟುವಟಿಕೆಗಳು ಮತ್ತು ಹವಾಮಾನ ಬದಲಾವಣೆಯಿಂದಾಗಿ ಈ ನಗರಗಳು ದೆಹಲಿಯ ಮಾದರಿಯಲ್ಲೇ ಅತಿಯಾದ ಮಾಲಿನ್ಯದತ್ತ ಸಾಗುತ್ತಿವೆಯೇ ಎಂಬ ಆತಂಕ ತಜ್ಞರಲ್ಲಿ ಮೂಡಿದೆ.
ಗಾಳಿಯಲ್ಲಿನ ಈ ವಿಷಕಾರಿ ಅಂಶಗಳು ಶ್ವಾಸಕೋಶದ ಕ್ಯಾನ್ಸರ್, ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ನೇರ ಆಹ್ವಾನ ನೀಡುತ್ತಿವೆ. ಅದರಲ್ಲೂ ಮಕ್ಕಳು ಮತ್ತು ವೃದ್ಧರು ಈ ಕಲುಷಿತ ಗಾಳಿಯಿಂದಾಗಿ ಹೆಚ್ಚಿನ ಅಪಾಯ ಎದುರಿಸುತ್ತಿದ್ದಾರೆ. ಸಾರ್ವಜನಿಕರು ಮಾಸ್ಕ್ ಧರಿಸುವುದು ಮತ್ತು ಅನಗತ್ಯವಾಗಿ ಕಲುಷಿತ ಪ್ರದೇಶಗಳಿಗೆ ತೆರಳದಿರುವುದು ಒಳಿತೆಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.



