ಹೊಸದಿಗಂತ ಡಿಜಿಟಲ್ ಡೆಸ್ಕ್:
2025ರಲ್ಲಿ ಬಾಲಿವುಡ್‌ನಲ್ಲಿ ಸ್ಟಾರ್ ಹೀರೋಗಳಿಗಿಂತ ಯುವ ಹೀರೋಗಳ ಹವಾ ಹೆಚ್ಚಾಗುತ್ತಿದೆ. ಕನ್ನಡದಲ್ಲಿ ಯುವ ಹಾಗೂ ಕಿರೀಟಿ ಅಭಿನಯದ ‘ಎಕ್ಕ’ ಮತ್ತು ‘ಜೂನಿಯರ್’ ಸಿನಿಮಾಗಳು ಯಶಸ್ಸು ಕಂಡಿದ್ದರೆ, ಹಿಂದಿಯಲ್ಲಿ ಹೊಸ ಹೀರೋ ಅಹಾನ್ ಪಾಂಡೆ ಅಭಿನಯದ ‘ಸೈಯಾರ’ ಚಿತ್ರವು ಭರ್ಜರಿ ಯಶಸ್ಸು ದಾಖಲಿಸಿದೆ. ಜುಲೈ 18 ರಂದು ಬಿಡುಗಡೆಯಾದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಕೇವಲ ಮೂರು ದಿನಗಳಲ್ಲಿ 105 ಕೋಟಿ ಗಳಿಸಿ ಸಂಚಲನ ಮೂಡಿಸಿದೆ.
‘ಆಶಿಕಿ 2’ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದಿದ್ದ ನಿರ್ದೇಶಕ ಮೋಹಿತ್ ಸೂರಿ, ‘ಸೈಯಾರ’ ಚಿತ್ರವನ್ನು ಸಹ ಅದೇ ಶೈಲಿಯಲ್ಲಿ ನಿರ್ಮಿಸಿದ್ದಾರೆ. ಈ ಚಿತ್ರದ ಮೂಲಕ ಅಹಾನ್ ಪಾಂಡೆ ನಟನ ವೃತ್ತಿಗೆ ಅಧಿಕೃತವಾಗಿ ಕಾಲಿಟ್ಟಿದ್ದು, ಪ್ರೇಮ ಕಥೆಯ ಶೈಲಿಯಲ್ಲಿ ಅವರ ಅಭಿನಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಅಹಾನ್ ಪಾಂಡೆ ಬಾಲಿವುಡ್ ಹಿರಿಯ ನಟ ಚಂಕಿ ಪಾಂಡೆ ಅವರ ಸಹೋದರ ಚಿಕ್ಕಿ ಪಾಂಡೆ ಪುತ್ರ.
ಬಾಕ್ಸ್ ಆಫೀಸ್‌ನಲ್ಲಿ ದಾಖಲೆಯ ಓಟ
‘ಸೈಯಾರ’ ಚಿತ್ರವು ಬಿಡುಗಡೆಯ ಮೊದಲ ದಿನ 21 ಕೋಟಿ, ಎರಡನೇ ದಿನ 25 ಕೋಟಿ ಮತ್ತು ಮೂರನೇ ದಿನ 37 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಭಾರತದೊಳಗಿನ ಒಟ್ಟು ಕಲೆಕ್ಷನ್ 83 ಕೋಟಿ ಆಗಿದ್ದು, ವಿದೇಶದ ಕಲೆಕ್ಷನ್ ಸೇರಿ ಚಿತ್ರವು 105 ಕೋಟಿ ಮಾರ್ಕ್ ತಲುಪಿದೆ. ಯುವ ಹೀರೋ ನಟನೆಯ ಚಿತ್ರವೊಂದು ಇಷ್ಟು ವೇಗದಲ್ಲಿ ಯಶಸ್ಸು ಕಾಣುವುದು ಚಿತ್ರರಂಗದಲ್ಲಿ ವಿಶೇಷ ಬೆಳವಣಿಗೆಯಾಗಿ ಕಾಣಲಾಗಿದೆ.
ಚಿತ್ರದ ಈ ವೇಗ ಮುಂದುವರೆದರೆ, ‘ಸೈಯಾರ’ ಮುಂದಿನ ವಾರಗಳಲ್ಲಿ 300 ಕೋಟಿ ಕ್ಲಬ್ ಸೇರುವ ಭರವಸೆ ನೀಡುತ್ತಿದೆ. ಇದೀಗ ಯುವ ತಲೆಮಾರಿನ ಹೀರೋಗಳು ಬಾಕ್ಸ್ ಆಫೀಸ್‌ನಲ್ಲಿ ಹೊಸ ಯುಗ ಆರಂಭಿಸುತ್ತಿದ್ದಾರೆ ಎಂಬ ಭಾವನೆ ಚಿತ್ರೋದ್ಯಮದಲ್ಲಿ ಬೆಳೆಯುತ್ತಿದೆ.