ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಟೆಸ್ಟ್‌ಗಳ ಸರಣಿಯ ನಾಲ್ಕನೇ ಪಂದ್ಯ ಜುಲೈ 23ರಿಂದ ಮ್ಯಾಚೆಸ್ಟರ್‌ನ ಓಲ್ಡ್ ಟ್ರಾಫೋರ್ಡ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯ ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕವಾಗಿದ್ದು, ಸರಣಿಯನ್ನು ಸಮಪಾಲು ಮಾಡಲು ಗೆಲುವು ಅಥವಾ ಡ್ರಾ ಅವಶ್ಯಕ. ಆದರೆ ಟೀಮ್ ಇಂಡಿಯಾ ಮೂರು ಪ್ರಮುಖ ಆಟಗಾರರು ಈ ಪಂದ್ಯದಿಂದ ಹೊರನಡೆದಿದ್ದಾರೆ.
ಎಡಗೈ ವೇಗಿ ಅರ್ಷದೀಪ್ ಸಿಂಗ್ ಅಭ್ಯಾಸದ ವೇಳೆ ಕೈಗೆ ಗಾಯಮಾಡಿಕೊಂಡಿದ್ದಾರೆ. ಇದರಿಂದಾಗಿ ಅವರು ನಾಲ್ಕನೇ ಪಂದ್ಯಕ್ಕೆ ಲಭ್ಯವಿಲ್ಲ. ಮೂರನೇ ಟೆಸ್ಟ್ ಬಳಿಕ ಅಭ್ಯಾಸದ ಸಮಯದಲ್ಲಿ ಈ ಗಾಯ ಸಂಭವಿಸಿದೆ. ಲಾರ್ಡ್ಸ್ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಆಕಾಶ್ ದೀಪ್ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತೊಡೆಸಂದು ನೋವಿನಿಂದ ಬಳಲುತ್ತಿರುವ ಅವರು ಕಳೆದ ಪಂದ್ಯದಲ್ಲಿ ಕೇವಲ 8 ಓವರ್‌ಗಳನ್ನು ಎಸೆದಿದ್ದರು. ಇದೀಗ ಅವರೂ ನಾಲ್ಕನೇ ಪಂದ್ಯದಿಂದ ಹೊರಗುಳಿಯಲಿದ್ದಾರೆ.
ಯುವ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಜಿಮ್‌ನಲ್ಲಿ ತರಬೇತಿ ಪಡೆಯುವ ವೇಳೆ ಮೊಣಕಾಲಿಗೆ ಗಾಯಗೊಂಡಿದ್ದು, ಈ ಗಾಯದಿಂದ ಅವರು ಮುಂದಿನ ಪಂದ್ಯದಲ್ಲಿ ಭಾಗವಹಿಸಲು ಸಾಧ್ಯವಿಲ್ಲ.
ಇತ್ತ ಮೂವರು ಆಟಗಾರರ ಅಲಭ್ಯತೆಯ ನಡುವೆಯೇ ಹರ್ಯಾಣದ ವೇಗಿ ಅನ್ಶುಲ್ ಕಂಬೋಜ್ ಟೀಮ್ ಇಂಡಿಯಾಗೆ ಸೇರ್ಪಡೆಯಾಗಿದ್ದಾರೆ. ಇವರು ಭಾರತ ಎ ತಂಡವನ್ನು ಪ್ರತಿನಿಧಿಸಿದ್ದವರು. ಅವರಿಗೆ ಪಂದ್ಯಕ್ಕಿಂತಲೂ ಮುನ್ನ ಕೊನೆಯ ಅವಕಾಶ ಲಭಿಸುವ ಸಾಧ್ಯತೆ ಇದೆ.