ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಸತ್ತಿನ ಮುಂಗಾರು ಅಧಿವೇಶನ ಸೋಮವಾರ ಆರಂಭವಾಗಿದ್ದು, ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ಹಲವಾರು ಸಂಸದರು ಪಹಲ್ಗಾಮ್ ದಾಳಿ ಮತ್ತು ಆಪರೇಷನ್ ಸಿಂಧೂರ್ ಕುರಿತು ಚರ್ಚೆಗಾಗಿ ಪಟ್ಟು ಹಿಡಿದಿವೆ. ಪ್ರತಿಪಿಕ್ಷಗಳ ಗದ್ದಲದ ನಡುವೆ ಉಭಯ ಸದನಗಳನ್ನು ಮಧ್ಯಾಹ್ನ 12ಕ್ಕೆ ಮುಂದೂಡಲಾಗಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಏರ್ ಇಂಡಿಯಾ AI-171 ವಿಮಾನ ಪತನದಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಇಂದು ಸಂಸತ್ ಮಳೆಗಾಲದ ಅಧಿವೇಶನ ಆರಂಭವಾಗಿದೆ.
ಸಂತಾಪ ಸೂಚಕದ ನಂತರ, ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷದ ಸದಸ್ಯರು ಎದ್ದು ನಿಂತು, ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದ ಮೇಲೆ ದಾಳಿ ನಡೆಸಿದ ಆಪರೇಷನ್ ಸಿಂದೂರ್ ಬಗ್ಗೆ ಚರ್ಚೆ ನಡೆಸುವಂತೆ ಒತ್ತಾಯಿಸಿ ಬಲವಾದ ಪ್ರತಿಭಟನೆ ನಡೆಸಿದರು.