ದೊಡ್ಡಪತ್ರೆ ಅಥವಾ ಓಮ ಸೊಪ್ಪು ಎಂದೇ ಖ್ಯಾತವಾಗಿರುವ ಈ ಸಸ್ಯ ಕೇವಲ ಆಹಾರದ ರುಚಿಗೆ ಮಾತ್ರವಲ್ಲ ಆರೋಗ್ಯಕ್ಕೂ ಬಹುಪಯೋಗಿ. ದೊಡ್ಡಪತ್ರೆ ಗಿಡವನ್ನು ಮನೆಯಲ್ಲಿಯೇ ಸುಲಭವಾಗಿ ಬೆಳೆಸಬಹುದು. ಅತಿ ಕಡಿಮೆ ಜಾಗ, ಸ್ವಲ್ಪ ಕಾಳಜಿಯೊಂದಿಗೆ ಇದು ಬೆಳೆದರೆ ಬೇಸಿಗೆ, ಚಳಿಗಾಲ ಎಲ್ಲ ಕಾಲಕ್ಕೂ ಹಸಿರಾಗಿರುತ್ತದೆ. ಇದು ಒಂದು ಔಷಧೀಯ ಸಸ್ಯವಾಗಿದ್ದು ಹೊಟ್ಟೆ ನೋವು, ಜೀರ್ಣಕ್ರಿಯೆ ಸಮಸ್ಯೆಗಳಿಗೆ ಉತ್ತಮ ಮನೆಮದ್ದು.
ಸೊಪ್ಪಿನಿಂದ ಗಿಡ ಬೆಳೆಸುವುದು
ಮಾರುಕಟ್ಟೆಯಲ್ಲಿ ಲಭ್ಯವಿರುವ ದೊಡ್ಡಪತ್ರೆ ಸೊಪ್ಪಿನ ಕಾಂಡವನ್ನು ಮಣ್ಣಿನಲ್ಲಿ ನೆಡಬೇಕು.
ಸರಿಯಾದ ಮಣ್ಣಿನ ಆಯ್ಕೆ
ದೊಡ್ಡಪತ್ರೆಗೆ ಬೆಚ್ಚಗಿನ ಮತ್ತು ನೀರು ಹಿಡಿಯದ ರೀತಿಯ ಮಣ್ಣು ಬೇಕು. ಮಡಿಕೆ ಅಥವಾ ಒಂದು ಕುಂಡದಲ್ಲಿ ನೀಡುವುದಾದರೆ ಅದಕ್ಕೆ ಒಂದು ಸಣ್ಣ ತೂತು ಮಾಡಿ, ಇದು ನೀರು ನಿಲ್ಲದಂತೆ ನೋಡಿಕೊಳ್ಳುತ್ತದೆ. ಮಣ್ಣಿನ ಮಿಶ್ರಣದಲ್ಲಿ ಗೋಮಯ, ತರಕಾರಿ ಸಿಪ್ಪೆಗಳನ್ನು ಸೇರಿಸಬಹುದು.
ಬೆಳಕು ಮತ್ತು ನೀರಿನ ಅವಶ್ಯಕತೆ
ಓಮ ಸೊಪ್ಪು ಹೆಚ್ಚು ಸೂರ್ಯನ ಬೆಳಕು ಬಯಸುತ್ತದೆ. ಆದ್ದರಿಂದ ಬಲ್ಕನಿ ಅಥವಾ ಮನೆಯ ಹೊರಾಂಗಣದಲ್ಲಿ ಇಡುವುದು ಉತ್ತಮ. ಆದರೆ ಹಗಲು 3-4 ಗಂಟೆ ಬೆಳಕು ಸಾಕು. ನೀರನ್ನು ದಿನನಿತ್ಯ ನೀಡಬೇಕಾದ ಅವಶ್ಯಕತೆ ಇಲ್ಲ. ಮಣ್ಣು ಒಣಗಿದಾಗ ಮಾತ್ರ ನೀರು ಹಾಕುವುದು ಸೂಕ್ತ.
ದೊಡ್ಡಪತ್ರೆ ಎಲೆ ಬಳಸೋದು ಹೇಗೆ
ಈ ಗಿಡದ ಎಲೆಗಳನ್ನು ನೇರವಾಗಿ ಸಾರು, ಪಲ್ಯ, ತಂಪು ಪಾನೀಯಗಳಲ್ಲಿ ಬಳಸಬಹುದು. ಜೀರ್ಣಕ್ರಿಯೆ ತೊಂದರೆ ಇದ್ದರೆ ಎಲೆಗಳನ್ನು ಬಿಸಿ ನೀರಿನಲ್ಲಿ ಹಾಕಿ ಕುಡಿಯಬಹುದು. ಅಲ್ಲದೇ, ಈ ಹಸಿರು ಎಲೆಗಳಿಂದ ಘಮಿಸುವ ಎಣ್ಣೆ ಕೂಡ ತಯಾರಿಸಬಹುದು.