ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಂಟ್ವಾಳ ಸಹಿತ ಸುತ್ತಮತ್ತಲಿನ ವಿವಿಧ ಭಾಗಗಳಿಂದ ತೀರ್ಥಕ್ಷೇತ್ರಗಳ ಸಂದರ್ಶನಕ್ಕಾಗಿ ತೆರಳಿದ್ದ 47 ಮಂದಿ ಪ್ರವಾಸಿಗರು ಹಿಮಾಚಲ ಪ್ರದೇಶದಲ್ಲಿ ಭೂಕುಸಿತವುಂಟಾಗಿ ಹೆದ್ದಾರಿಗೆ ಮಣ್ಣು ಜರಿದ ಪರಿಣಾಮ ಬ್ಲಾಕ್ ನಲ್ಲಿ ಸಿಲುಕಿದ್ದು,ಅದೃಷ್ಟವಶಾತ್ ಯಾವುದೇ ಸಮಸ್ಯೆಯಿಲ್ಲದೆ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ
ಹಿಮಾಚಲ ಪ್ರದೇಶದ ಶಿಮ್ಲಾ ಮನಾಲಿ ಹೆದ್ದಾರಿಯಲ್ಲಿ ದೊಡ್ಡ ಮಟ್ಟದ ಭೂ ಕುಸಿತ ಉಂಟಾಗಿದ್ದು, ಬಂಟ್ವಾಳ ಪರಿಸರದಿಂದ ತೆರಳಿದ್ದ ಮೂರು ವಾಹನಗಳ ಸಂಚರಿಸುತ್ತಿದ್ದಂತೆ ಒಂದೆರಡು ಕಿ.ಮೀ.ದೂರದಲ್ಲಿ ಮಣ್ಣು ಕುಸಿತದಿಂದಾಗಿ ಕೆಲ ವಾಹನಗಳು ಗುಡ್ಡಕಸಿತದ ಮಣ್ಣಿನಡಿಗೆ ಸಿಲುಕಿವೆ ಎಂದು ಬಂಟ್ವಾಳದಿಂದ ತೆರಳಿದ ಪ್ರವಾಸಿಗರ ಪೈಕಿ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಆದರೆ ಬಂಟ್ವಾಳದ 47 ಪ್ರಯಾಣಿಕರಿದ್ದ ಮೂರು ವಾಹನಗಳು ಕುಸಿತದ ಸ್ಥಳಕ್ಕಿಂತ ಬಹಳಷ್ಟು ದೂರದಲ್ಲಿದ್ದ ಹಿನ್ನೆಲೆಯಲ್ಲಿ ಯಾವುದೇ ಅಪಾಯಕ್ಕೆ ಸಿಲುಕಿಲ್ಲ ಎಂದು ಹೇಳಲಾಗಿದೆ. ಗುಡ್ಡದಿಂದ ಮಣ್ಣು ಕುಸಿಯುತ್ತಿದ್ದ ದೃಶ್ಯವಂತು ಭೀತಿಯನ್ನು ತಂದಿತ್ತು ಎಂದು ಪ್ರತ್ಯಕ್ಷದರ್ಶಿಗಳ ವಿವರಣೆಯಾಗಿದೆ.
ಈ ಸಂದರ್ಭ ಸುಮಾರು 3 ಕಿ.ಮೀ.ವರೆಗೆ ವಾಹನಗಳ ಸಾಲು ನಿಂತಿದ್ದು, ಮಣ್ಣು ತೆರವು ಕಾರ್ಯ ಭರದಿಂದ ಸಾಗುತ್ತಿದೆ ಎಂದು ಪ್ರವಾಸಿಗರು ತಿಳಿಸಿದ್ದಾರೆ.
ಹೆದ್ದಾರಿಯಲ್ಲಿ ಸಾಕಷ್ಟು ಅಂಗಡಿ ಮುಂಗಟ್ಟುಗಳು ಇದ್ದುದರಿಂದ ಎಷ್ಟು ಹೊತ್ತು ಬ್ಲಾಕ್ ಆದರೂ ಊಟ,ತಿಂಡಿ,ಉಪಹಾರಕ್ಕೆ ಯಾವುದೇ ಸಮಸ್ಯೆಯಾಗಲಿಲ್ಲ,ಸಂಜೆಯ ವೇಳೆಗೆ ರಸ್ತೆಯನ್ನು ಬದಲಿಸಿಕೊಂಡು ಮುಂದಕ್ಕೆ ಸಾಗಿದ್ದೆವೆ ಎಂದು ಪ್ರವಾಸಿಗರು ತಿಳಿಸಿದ್ದಾರೆ.