ಹೊಸದಿಗಂತ ಡಿಜಿಟಲ್ ಡೆಸ್ಕ್:
ನ್ಯಾಯಮೂರ್ತಿ ಯಶವಂತ್ ವರ್ಮಾ ವಿರುದ್ಧದ ಮಹಾಭಿಯೋಗ ನಿರ್ಣಯದ ಕುರಿತು ವಿರೋಧ ಪಕ್ಷಗಳ ನಾಯಕರು ಸಹಿ ಮಾಡಿದ ಪತ್ರವನ್ನು ಸೋಮವಾರ ಲೋಕಸಭೆ, ರಾಜ್ಯಸಭೆ ಸ್ಪೀಕರ್ ಗಳಿಗೆ ಸಲ್ಲಿಸಲಿದ್ದಾರೆ
ಸಂವಿಧಾನದ 124, 217 ಮತ್ತು 218ನೇ ವಿಧಿಗಳ ಅಡಿಯಲ್ಲಿ ನ್ಯಾಯಮೂರ್ತಿ ವರ್ಮಾ ಅವರನ್ನು ಪದಚ್ಯುತಗೊಳಿಸುವಂತೆ ವಿವಿಧ ಪಕ್ಷಗಳ ನಿಯೋಗವು 145 ಸದಸ್ಯರ ಸಹಿಯನ್ನು ಒಳಗೊಂಡ ನೊಟೀಸ್ ಅನ್ನು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರಿಗೆ ಸಲ್ಲಿಸಿದೆ.
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಬಿಜೆಪಿಯ ನಾಯಕರಾದ ರವಿಶಂಕರ್ ಪ್ರಸಾದ್ ಮತ್ತು ಅನುರಾಗ್ ಠಾಕೂರ್. ಎನ್ಸಿಪಿ (ಎಸ್ಪಿ) ನಾಯಕಿ ಸುಪ್ರಿಯಾ ಸುಳೆ, ಕಾಂಗ್ರೆಸ್ ನಾಯಕರಾದ ಕೆ.ಸಿ.ವೇಣುಗೋಪಾಲ್, ಕೆ.ಸುರೇಶ್, ಡಿಎಂಕೆ ನಾಯಕ ಟಿ.ಆರ್.ಬಾಲು,ಮೊದಲಾದವರು ನೊಟೀಸ್ಗೆ ಸಹಿ ಹಾಕಿದವರಲ್ಲಿ ಸೇರಿದ್ದಾರೆ.
ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್ ಅವರಿಗೂ ಇದೇ ರೀತಿಯ ನೊಟೀಸ್ ಸಲ್ಲಿಸಲಾಯಿತು. ಮೇಲ್ಮನೆಯ 63 ಸದಸ್ಯರು ನೋಟಿಸ್ಗೆ ಸಹಿ ಹಾಕಿದ್ದಾರೆ. ಲೋಕಸಭೆ ಸ್ಪೀಕರ್ ಮತ್ತು ರಾಜ್ಯಸಭಾ ಸಭಾಪತಿ ಅವರು ಈ ನೊಟೀಸ್ ಅನ್ನು ಅಂಗೀಕರಿಸಬಹುದು ಅಥವಾ ತಿರಸ್ಕರಿಸಬಹುದು.
ನ್ಯಾಯಮೂರ್ತಿಯೊಬ್ಬರನ್ನು ಪದಚ್ಯುತಗೊಳಿಸುವುದಕ್ಕೆ ಸಂಬಂಧಿಸಿದ ನೋಟಿಸ್ಅನ್ನು ಸಂಸತ್ತಿನ ಎರಡೂ ಸದನಗಳಲ್ಲಿ ಸಲ್ಲಿಸಿದಾಗ ಅವರ ವಿರುದ್ಧದ ಆರೋಪಗಳನ್ನು ಪರಿಶೀಲಿಸಲು ಲೋಕಸಭಾ ಸ್ಪೀಕರ್ ಮತ್ತು ರಾಜ್ಯಸಭಾ ಸಭಾಪತಿಯವರು ಸಮಿತಿಯನ್ನು ರಚಿಸಬೇಕು ಎಂದು ನ್ಯಾಯಮೂರ್ತಿಗಳ (ವಿಚಾರಣಾ) ಕಾಯ್ದೆ ಹೇಳುತ್ತದೆ. ಆದರೆ ಪದಚ್ಯುತಗೊಳಿಸುವ ನಿರ್ಣಯವನ್ನು ಎರಡೂ ಸದನಗಳಲ್ಲಿ ಅಂಗೀಕರಿಸದ ಹೊರತು ಸಮಿತಿಯನ್ನು ರಚಿಸಬಾರದು ಎಂದು ಕಾಯ್ದೆಯಲ್ಲಿ ಹೇಳಲಾಗಿದೆ.
ನಿವಾಸದಲ್ಲಿ ನಗದು ಪತ್ತೆ ಪ್ರಕರಣದಲ್ಲಿ ವರ್ಮಾ ವಿರುದ್ಧದ ಆರೋಪಗಳು ಸಾಬೀತಾಗಿವೆ ಎಂದು ಸುಪ್ರೀಂ ಕೋರ್ಟ್ ನೇಮಿಸಿದ್ದ ವಿಚಾರಣಾ ಸಮಿತಿ ತಿಳಿಸಿತ್ತು. ಅವರನ್ನು ಪದಚ್ಯುತಗೊಳಿಸುವ ಪ್ರಕ್ರಿಯೆ ಆರಂಭಿಸುವಂತೆ ಸುಪ್ರೀಂ ಕೋರ್ಟ್ ಈ ಹಿಂದಿನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಶಿಫಾರಸು ಮಾಡಿದ್ದರು.
ವಿವಾದ ಕೇಳಿಬಂದ ಬೆನ್ನಲ್ಲೇ ನ್ಯಾಯಮೂರ್ತಿ ವರ್ಮಾ ಅವರನ್ನು ದೆಹಲಿ ಹೈಕೋರ್ಟ್ನಿಂದ ಅಲಹಾಬಾದ್ ಹೈಕೋರ್ಟ್ಗೆ ವರ್ಗಾವಣೆ ಮಾಡಲಾಗಿತ್ತು.