ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯುವುದು ಮಾತ್ರವಲ್ಲ, ಅದನ್ನು ಕಾಯ್ದುಕೊಳ್ಳುವುದು ಹೆಚ್ಚು ಕಠಿಣವಾದ ಕಾರ್ಯ. ಈ ಸತ್ಯವನ್ನು ಸರ್ಫರಾಜ್ ಖಾನ್ ತಮ್ಮ ಕ್ರಿಕೆಟ್ ಜೀವನದ ಮೂಲಕ ಇನ್ನೊಮ್ಮೆ ಸಾಬೀತುಪಡಿಸಿದ್ದಾರೆ. ಉತ್ತಮ ಬ್ಯಾಟಿಂಗ್ ಸಾಧನೆ ನೀಡಿದರೂ ತಮ್ಮ ಫಿಟ್ನೆಸ್ ಕೊರತೆಯಿಂದ ಟೀಂ ಇಂಡಿಯಾ ಹಾಗೂ ಐಪಿಎಲ್ನಿಂದ ಹೊರಗುಳಿದ ಈ ಆಟಗಾರ ಇದೀಗ ತಮ್ಮ ಫಿಟ್ನೆಸ್ ಪಯಣದಿಂದ ಎಲ್ಲರ ಗಮನ ಸೆಳೆದಿದ್ದಾರೆ. ಸರ್ಫರಾಜ್ ಖಾನ್ ಒಂದೇ ತಿಂಗಳ ಒಳಗೆ 17 ಕೆಜಿ ತೂಕ ಇಳಿಸಿಕೊಂಡಿದ್ದು ಕ್ರಿಕೆಟ್ ಲೋಕದಲ್ಲಿ ಮತ್ತೊಮ್ಮೆ ಸದ್ದು ಮಾಡುತ್ತಿದ್ದಾರೆ.
ದೇಶೀಯ ಕ್ರಿಕೆಟ್ನಲ್ಲಿ ಸತತ ಉತ್ತಮ ಪ್ರದರ್ಶನ ನೀಡಿದ್ದರೂ, ಫಿಟ್ನೆಸ್ ಲೆವಲಿನಲ್ಲಿ ಸಮರ್ಪಕವಾಗಿ ತೊಡಗಿಸಿಕೊಂಡಿರದ ಕಾರಣದಿಂದಾಗಿ ಸರ್ಫರಾಜ್ ಖಾನ್ ಟೀಂ ಇಂಡಿಯಾ ಪ್ರವೇಶದಲ್ಲಿ ತಡೆ ಎದುರಿಸಿದ್ದರು. ಬಿಸಿಸಿಐ ಆಯ್ಕೆ ಸಮಿತಿಯು ಕೂಡ ಈ ಕಾರಣದಿಂದ ಅವರನ್ನು ತಂಡದ ಹೊರಗಿಟ್ಟು ವಿಮರ್ಶೆಗೆ ಒಳಪಡಿತ್ತು.
ಹರ್ಭಜನ್ ಸಿಂಗ್ ಸೇರಿದಂತೆ ಅನೇಕ ಹಿರಿಯರು ಫಿಟ್ನೆಸ್ ಕಡೆ ಹೆಚ್ಚು ಗಮನಹರಿಸಬೇಕೆಂದು ಸಲಹೆ ನೀಡಿದ ಹಿನ್ನೆಲೆಯಲ್ಲಿ, ಸರ್ಫರಾಜ್ ತಮ್ಮ ಜೀವನಶೈಲಿಯಲ್ಲಿ ದೊಡ್ಡ ಬದಲಾವಣೆಗೆ ಕೈಹಾಕಿದ್ದಾರೆ. ತಾವು 17 ಕೆಜಿ ತೂಕ ಇಳಿಸಿಕೊಂಡಿದ್ದಾರೆ ಎಂಬ ಮಾಹಿತಿ ಜಿಮ್ನಲ್ಲಿ ತಗೆದ ಫೋಟೋ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ತಮ್ಮ ವರ್ಕೌಟ್ ಪೋಟೋ ಹಂಚಿಕೊಂಡ ಬೆನ್ನಲ್ಲೇ ಅಭಿಮಾನಿಗಳು ಅವರ ದೃಢಸಂಕಲ್ಪಕ್ಕೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಇದು ನಿಜವಾದ ಸ್ಪೋರ್ಟ್ಸ್ಮನ್ ಶಿಸ್ತು” ಎಂಬ ಶ್ಲಾಘನೆಗಳು ನೆಟ್ಟಿಗರಿಂದ ಹರಿದು ಬರುತ್ತಿವೆ. ಸದ್ಯದಲ್ಲೇ ಫಿಟ್ನೆಸ್ನಿಂದಲೇ ತಮ್ಮ ಜಾಗ ಕಳೆದುಕೊಂಡ ಸರ್ಫರಾಜ್ ಮತ್ತೊಮ್ಮೆ ಆಟದ ಮೈದಾನದಲ್ಲಿ ತಿರುಗಿ ಬರುವ ನಿರೀಕ್ಷೆ ಅಭಿಮಾನಿಗಳಲ್ಲಿದೆ.