ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಇತರ ಆರೋಪಿಗಳ ಜಾಮೀನು ರದ್ದುಗೊಳಿಸಲು ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಇಂದು ಸುಪ್ರೀಂ ಕೋರ್ಟ್ನಲ್ಲಿ ನಡೆಯಬೇಕಾಗಿತ್ತು. ಆದರೆ ದರ್ಶನ್ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಗೈರಾದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಜುಲೈ 24ಕ್ಕೆ ಮುಂದೂಡಲಾಗಿದೆ.
ಪ್ರಸ್ತುತ ಪ್ರಕರಣದಲ್ಲಿ ದರ್ಶನ್ ಮತ್ತು ಇತರ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರಾಗಿತ್ತು. ಈ ಆದೇಶದ ವಿರುದ್ಧ ಕರ್ನಾಟಕ ಪೊಲೀಸ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಹೈಕೋರ್ಟ್ ಆದೇಶ ಪ್ರಶ್ನಿಸಿ ಅಪೀಲ್ ಸಲ್ಲಿಸಲಾಗಿದೆ. ಇಂದು ವಿಚಾರಣೆ ಆರಂಭವಾದ ಬಳಿಕ, ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಹಾಗೂ ಆರ್. ಮಹದೇವನ್ ಅವರಿದ್ದ ಪೀಠ, ಪ್ರತಿಪಕ್ಷ ವಕೀಲರಿಗೆ ಲಿಖಿತ ವಾದ ಮಂಡನೆ ಸಲ್ಲಿಸಲು ಸೂಚನೆ ನೀಡಿತು.
ದರ್ಶನ್ ಪರ ವಕೀಲರಾದ ಸಿದ್ದಾರ್ಥ್ ಧವೆ ಅವರು, “ನಾವು ಬಂಧನದ ಕಾರಣಗಳ ಕುರಿತು ವಾದಿಸುತ್ತಿಲ್ಲ. ಕೇಸ್ನ ಮೆರಿಟ್ಗಳನ್ನೇ ನಾವೀಗ ಕೋರ್ಟ್ ಮುಂದೆ ಮಂಡಿಸುತ್ತಿದ್ದೇವೆ,” ಎಂದು ಹೇಳಿದ್ದಾರೆ. ಆದರೆ ಕಪಿಲ್ ಸಿಬಲ್ ಗೈರಾದ ಹಿನ್ನೆಲೆಯಲ್ಲಿ, ಹೆಚ್ಚಿನ ಸಮಯ ಕೋರಿ ವಿಚಾರಣೆಯನ್ನು ಮುಂದೂಡಲಾಗಿದೆ.
ಕೋರ್ಟ್ ಈಗ ನಿಗದಿಪಡಿಸಿರುವ ದಿನಾಂಕವು ಜುಲೈ 24. ಇದೇ ವೇಳೆ ಜಾಮೀನು ರದ್ದುಗೊಳಿಸುವ ಬಗ್ಗೆ ತೀರ್ಮಾನವಾಗುವ ನಿರೀಕ್ಷೆ ಇದೆ. ಜಾಮೀನು ರದ್ದಾದರೆ, ನಟ ದರ್ಶನ್ ಸೇರಿದಂತೆ A1 ಪವಿತ್ರ, A2 ದರ್ಶನ್ ಸೇರಿ ಒಟ್ಟು 7 ಮಂದಿ ಆರೋಪಿಗಳು ಮತ್ತೆ ಜೈಲಿಗೆ ಹೋಗಬೇಕಾಗುತ್ತದೆ.