ಇಡೀ ವಾರದ ಕೆಲಸದ ಕಿರಿಕಿರಿ, ಊರಿನ ಸಡ್ಡು ಗದ್ದಲದಿಂದ ದೂರ ಹಸಿರು ನೈಸರ್ಗಿಕ ಪರಿಸರದಲ್ಲಿ ಸ್ವಚಂದವಾಗಿ ಉಸಿರಾಡಬೇಕು ಅಂತಾ ಯೋಚಿಸುತ್ತಿದ್ದೀರಾ? ಹಾಗಾದರೆ ಕುದುರೆಮುಖ ನಿಮಗಾಗಿ ಬೆಸ್ಟ್ ಡೆಸ್ಟಿನೇಶನ್. ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟದ ಮಧ್ಯೆ ಹಸಿರು ಬೆಟ್ಟಗಳು, ಧುಮ್ಮಿಕ್ಕುವ ಜಲಪಾತಗಳು, ಶಾಂತ ದಾರಿಗಳೊಂದಿಗೆ ತುಂಬಿದ ಕುದುರೆಮುಖ, ಪ್ರಕೃತಿ ಪ್ರೇಮಿಗಳು, ಟ್ರೆಕ್ಕಿಂಗ್ ಎನ್ಥುಸಿಯಾಸ್ಟ್ಗಳು ಮತ್ತು ಫೋಟೋಗ್ರಫಿ ಅಭಿಮಾನಿಗಳಿಗೆ ಅದ್ಭುತ ಸ್ಥಳ. ಇಲ್ಲಿಗೆ ಹೋಗಿದ್ರೆ ನಿಮಗೆ ತಪ್ಪದೇ ನೋಡಬೇಕಾದ ಐದು ಸ್ಥಳಗಳ ಪರಿಚಯ ಇಲ್ಲಿದೆ.
ಕುದುರೆಮುಖ ಚಾರಣ
ಕುದುರೆಮುಖವು ಕರ್ನಾಟಕದ ಅತ್ಯುತ್ತಮ ಚಾರಣ ಸ್ಥಳಗಳಲ್ಲಿ ಒಂದಾಗಿದೆ. ಹಚ್ಚ ಹಸಿರು ಕಾಡುಗಳು, ಪರ್ವತಗಳ ನಯನ ಮನೋಹರ ನೋಟ ಹಾಗೂ ಪ್ರಾಣಿಗಳ ಸಂಚಾರವು ಈ ಸ್ಥಳದ ವೈಶಿಷ್ಟ್ಯ. ಜುಲೈ ರಿಂದ ಸೆಪ್ಟೆಂಬರ್ ಅವಧಿಯಲ್ಲಿಯೇ ಚಾರಣಕ್ಕೆ ಸೂಪರ್ ಟೈಮ್. ಟ್ರೆಕಿಂಗ್ ಪ್ರಿಯರು ಇಲ್ಲಿ ಅನನ್ಯ ಅನುಭವ ಪಡೆಯುತ್ತಾರೆ.
ಹನುಮನ ಗುಂಡಿ ಜಲಪಾತ
ದಟ್ಟ ಕಾಡಿನ ಮಧ್ಯೆ ಧುಮ್ಮಿಕ್ಕುವ ಹನುಮನ ಗುಂಡಿ ಜಲಪಾತ, ಪ್ರಕೃತಿಪ್ರೇಮಿಗಳಿಗೆ ಸ್ವರ್ಗಸಮಾನ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದೊಳಗಿನ ಈ ಜಲಪಾತ, ಮಳೆಗಾಲದ ಸಮಯದಲ್ಲಿ ಅತ್ಯಂತ ಆಕರ್ಷಕವಾಗಿ ಕಾಣಿಸುತ್ತದೆ. ಶಾಂತ ಪರಿಸರದಲ್ಲಿ ಪ್ರಕೃತಿಯ ಸೌಂದರ್ಯವನ್ನು ಆನಂದಿಸಲು ಇದು ಒಳ್ಳೆಯ ಸ್ಥಳ.
ಕಳಸೇಶ್ವರ ದೇವಾಲಯ
ಕಳಸ ಪಟ್ಟಣದಲ್ಲಿರುವ ಈ ಪುರಾತನ ಶಿವಮಂದಿರವು ಧಾರ್ಮಿಕವಾಗಿ ಪ್ರಮುಖ ಸ್ಥಾನ ಪಡೆದಿದೆ. ಇಲ್ಲಿನ ಆಲಯದಲ್ಲಿ ಮಹಾಶಿವರಾತ್ರಿ ಸಂದರ್ಭದಲ್ಲಿ ಭಕ್ತರ ಮಹಾಪ್ರವಾಹ ಕಂಡುಬರುತ್ತದೆ. ಶಾಂತಿ ಹಾಗೂ ಭಕ್ತಿಯ ಅನುಭವ ಪಡೆಯಲು ಇಲ್ಲಿಗೆ ಭೇಟಿ ನೀಡುವುದು ಸೂಕ್ತ.
ಕದಂಬಿ ಜಲಪಾತ
ಕದಂಬಿ ಎಂಬ ಹಳ್ಳಿಯಲ್ಲಿರುವ ಈ ಜಲಪಾತ ತೀರಾ ಕಡಿಮೆ ಜನರಿಗೆ ಪರಿಚಿತವಾದ ನಿಗೂಢ ಸ್ಥಳ. ಅರಣ್ಯ ವಲಯದೊಳಗಿನ ಈ ಜಲಪಾತವನ್ನು ವೀಕ್ಷಿಸಲು ಅರಣ್ಯ ಇಲಾಖೆಯ ಅನುಮತಿ ಅಗತ್ಯವಿದೆ. ಪ್ರಕೃತಿ ಪ್ರೇಮಿಗಳಿಗೆ ಇದು ಒಂದು ರಹಸ್ಯ ದ್ವಾರವೇ ಸರಿ!
ಕುದುರೆಮುಖ ರಾಷ್ಟ್ರೀಯ ಉದ್ಯಾನವನ
ವೈವಿಧ್ಯಮಯ ವನ್ಯಜೀವಿಗಳ ತಾಣವಾಗಿರುವ ಈ ಉದ್ಯಾನವನ, ಭಾರತೀಯ ಜೀವವಿವಿಧತೆ ಸಂರಕ್ಷಣೆಯ ಮುಖ್ಯ ಭಾಗವಾಗಿದೆ. ಇಲ್ಲಿನ ಹಸಿರು ಪರಿಸರ, ಕಾಡುಮೃಗಗಳ ದರ್ಶನ, ಪಕ್ಷಿಗಳ ಕಲರವ ಎಲ್ಲವು ಮನೋಹರ.