ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಸೇನೆಯು ಅಮೆರಿಕದಿಂದ ಮೂರು ಅಪಾಚೆ ಗಾರ್ಡಿಯನ್ ಹೆಲಿಕಾಪ್ಟರ್‌ಗಳ ಮೊದಲ ಬ್ಯಾಚ್ ಅನ್ನು ಸ್ವೀಕರಿಸಿದೆ.
ಅಮೆರಿಕದ ಪ್ರಮುಖ ವಿಮಾನ ತಯಾರಿಕಾ ಕಂಪನಿ ಬೋಯಿಂಗ್, ಮೂರು ಅಪಾಚೆ ಕಾಂಬಾಟ್ ಚಾಪರ್ಗಳನ್ನು ಭಾರತೀಯ ಸೇನೆಗೆ ಪೂರೈಸಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ಸೇನೆಗೆ ಆರು ಹೆಲಿಕಾಪ್ಟರ್ಗಳನ್ನು ನೀಡಬೇಕೆಂಬ ಒಪ್ಪಂದದಂತೆ ಬೋಯಿಂಗ್ ಎಎಚ್-64ಇ ಅಪಾಚೆ ಚಾಪರ್ ಅನ್ನು ಪೂರೈಕೆ ಮಾಡಿದೆ ಎಂದು ಹೇಳಿದೆ.
ಎಎಚ್ 64 ಅಪಾಚೆ ಜಗತ್ತಿನ ಸುಧಾರಿತ ಬಹು ಹಂತದ ಕಾಂಬಾಟ್ ಹೆಲಿಕಾಪ್ಟರ್ ಆಗಿದ್ದು, ಅಮೆರಿಕ ಸೇನಾಪಡೆಗಳು ಬಳಸುತ್ತಿವೆ. ಇಂದು ಮೊದಲ ಹಂತದ ಸೇನಾ ವಿಮಾನಗಳು ಭಾರತಕ್ಕೆ ಆಗಮಿಸಿವೆ. ಈ ಹೆಲಿಕಾಪ್ಟರ್ ಗಳು ಭಾರತೀಯ ಸೇನಾ ಕಾರ್ಯಾಚರಣೆಯ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸುವ ನಿರೀಕ್ಷೆ ಇದೆ.
ಭಾರತೀಯ ವಾಯುಸೇನೆಯು 2015ರಲ್ಲಿ ಅಮೆರಿಕ ಸರ್ಕಾರ ಮತ್ತು ಬೋಯಿಂಗ್ ಸಂಸ್ಥೆಯೊಂದಿಗೆ 22 ಅಪಾಚೆ ಹೆಲಿಕಾಪ್ಟರ್ ಪೂರೈಕೆಗಾಗಿ ಒಪ್ಪಂದ ಮಾಡಿಕೊಂಡಿತ್ತು. ಇದರ ಜೊತೆಗೆ, 2017ರಲ್ಲಿ ಹೆಚ್ಚುವರಿಯಾಗಿ ರಕ್ಷಣಾ ಸಚಿವಾಲಯವು ಬೋಯಿಂಗ್ ಜೊತೆಗೆ 4,186 ಕೋಟಿ ರೂಪಾಯಿ ಮೌಲ್ಯದ ಆರು ಅಪಾಚೆ ಹೆಲಿಕಾಪ್ಟರ್ ಮತ್ತು ಶಸ್ತ್ರಾಸ್ತ್ರ ವ್ಯವಸ್ಥೆ ಪೂರೈಕೆ ಸಂಗ್ರಹ ಒಪ್ಪಂದಕ್ಕೆ ಸೇನೆಗೆ ಅನುಮೋದನೆ ನೀಡಿತ್ತು.