ಹೊಸದಿಗಂತ ಡಿಜಿಟಲ್ ಡೆಸ್ಕ್:
2025ರ ಏಷ್ಯಾಕಪ್ (Asia Cup 2025) ಟೂರ್ನಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ತಟಸ್ಥ ಸ್ಥಳದಲ್ಲಿ ಆಯೋಜಿಸಲು ಒಪ್ಪಿಕೊಂಡಿದೆ.
ಪಾಕಿಸ್ತಾನ ಜತೆಗಿನ ರಾಜಕೀಯ ಭಿನ್ನಭಿಪ್ರಾಯದಿಂದ ಭಾರತ ತಂಡ ಈ ಟೂರ್ನಿಯನ್ನು ತಟಸ್ಥ ಸ್ಥಳದಲ್ಲಿ ಆಯೋಜಿಸಲು ಒಪ್ಪಿಕೊಂಡಿದೆ.
ಈ ವರ್ಷದ ಆರಂಭದಲ್ಲಿ ನಡೆದಿದ್ದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನು ಆಡಲು ಭಾರತ ತಂಡ, ಪಾಕಿಸ್ತಾನಕ್ಕೆ ಹೋಗಿರಲಿಲ್ಲ ಹಾಗೂ ತನ್ನೆಲ್ಲಾ ಪಂದ್ಯಗಳನ್ನು ಯುಎಇಯ ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಡಿತ್ತು. ಆ ಮೂಲಕ ಚಾಂಪಿಯನ್ ಆಗಿ ಹೊರ ಹೊಮ್ಮಿತ್ತು.
ಗುರುವಾರ ಬಾಂಗ್ಲಾದೇಶದ ಢಾಕಾದಲ್ಲಿ ಏಷ್ಯಾ ಕ್ರಿಕೆಟ್ ಕೌನ್ಸಿಲ್ ವಾರ್ಷಿಕ ಸಭೆಯಲ್ಲಿ ಬಿಸಿಸಿಐನ ಅಧಿಕಾರಿಗಳು ಆನ್ಲೈನ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು. ಮುಂದಿನ ಐಸಿಸಿ ಟಿ20 ವಿಶ್ವಕಪ್ ನಿಮಿತ್ತ ಈ ಬಾರಿ ಏಷ್ಯಾ ಕಪ್ ಟೂರ್ನಿಯನ್ನು ಟಿ20 ಸ್ವರೂಪದಲ್ಲಿ ಆಯೋಜಿಸಲಾಗಿದೆ.
ಈ ಟೂರ್ನಿಯಲ್ಲಿ ಸಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿ ಕಾಣಿಸಿಕೊಳ್ಳಲಿದೆ ಎಂದು ಕೂಡ ವರದಿಯಾಗಿದೆ. ಪಾಕಿಸ್ತಾನ ತಂಡದ ಪಂದ್ಯಗಳನ್ನು ಬಿಸಿಸಿಐ, ದುಬೈ ಇಂಟರ್ನ್ಯಾಷನಲ್ ಕ್ರೀಡಾoಗಣದ ಹಾಗೂ ಅಬುದಾಬಿಯಲ್ಲಿ ಆಯೋಜಿಸಲು ಬಿಸಿಸಿಐ ಒಪ್ಪಿಕೊಂಡಿದೆ ಎಂದು ವರದಿಯಾಗಿದೆ.
ಏಷ್ಯಾ ಕಪ್ ಟೂರ್ನಿಯ ಆತಿಥ್ಯದ ಹಕ್ಕು ಬಿಸಿಸಿಐಗೆ ಇದೆ. ಜಮ್ಮು ಮತ್ತು ಕಾಶ್ಮೀರದ ಫಹಲ್ಗಾಮ್ನಲ್ಲಿ ಭಯೋತ್ಪಾದಕ ದಾಳಿಯ ನಂತರ ಭಾರತ ತಂಡ, ಏಷ್ಯಾ ಕಪ್ ಟೂರ್ನಿಯಲ್ಲಿ ಭಾಗವಹಿಸುವುದಿಲ್ಲ ಅಥವಾ ಆತಿಥ್ಯ ವಹಿಸುವುದಿಲ್ಲ ಎಂದು ಮೂಲಗಳು ಮೇ ತಿಂಗಳಲ್ಲಿ ತಿಳಿಸಿದ್ದವು. ಆದರೆ, ಇದೀಗ ಬಿಸಿಸಿಐ ಏಷ್ಯಾ ಕಪ್ ಟೂರ್ನಿಯನ್ನು ಆಯೋಜಿಸುತ್ತಿದೆ.
ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ಮುಂದಿನ ದಿನಗಳಲ್ಲಿ ಸಭೆ ಸೇರಿ ಸ್ಥಳಗಳು ಮತ್ತು ಪಂದ್ಯಾವಳಿಯ ವೇಳಾಪಟ್ಟಿಯನ್ನು ಅಂತಿಮಗೊಳಿಸಲಿದ್ದಾರೆ ಎಂದು ಇಂಡಿಯಾ ಟುಡೇ ಮೂಲಗಳು ತಿಳಿಸಿವೆ.
ಈ ಬಾರಿ ಏಷ್ಯಾ ಕಪ್ ಟೂರ್ನಿಯನ್ನು ಸೆಪ್ಟೆಂಬರ್ 7 ರಿಂದ ಮೂರನೇ ಅಥವಾ ನಾಲ್ಕನೇ ವಾರದವರೆಗೆ ತಾತ್ಕಾಲಿಕ ಅವಧಿಯನ್ನು ಪ್ರಸ್ತಾಪಿಸಲಾಗಿದೆ. ವಾಣಿಜ್ಯ ಯೋಜನೆಗೆ ಸಾಕಷ್ಟು ಸಮಯವನ್ನು ನೀಡುವ ಗುರಿಯೊಂದಿಗೆ ರಾಜೀವ್ ಶುಕ್ಲಾ ಮತ್ತು ಮೊಹ್ಸಿನ್ ನಖ್ವಿ ಕೂಡ ಆದಷ್ಟು ಬೇಗ ಪ್ರಾಯೋಜಕರೊಂದಿಗೆ ಚರ್ಚೆ ನಡೆಸಲಿದ್ದಾರೆ.