ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ವಿಮಾನ ನಿಲ್ದಾಣದಲ್ಲಿರುವ ತನ್ನ ಹೋಟೆಲ್ನಲ್ಲಿ ಆಹಾರದಲ್ಲಿ ಹುಳು ಪತ್ತೆಯಾಗಿದೆ ಎಂಬ ಸುಳ್ಳು ಘಟನೆಯನ್ನು ಸೃಷ್ಟಿಸಿ, ಬ್ರ್ಯಾಂಡ್ಗೆ ಮಸಿ ಬಳಿಯಲು ಮತ್ತು ಹಣ ಸುಲಿಗೆ ಮಾಡಲು ಯತ್ನಿಸಿದ ಗ್ರಾಹಕನ ವಿರುದ್ಧ ದಕ್ಷಿಣ ಭಾರತದ ಜನಪ್ರಿಯ ರೆಸ್ಟೋರೆಂಟ್ ಬ್ರ್ಯಾಂಡ್ ರಾಮೇಶ್ವರ ಕೆಫೆ ಪೊಲೀಸ್ ದೂರು ದಾಖಲಿಸಿದೆ.
ಗುರುವಾರ ರಾಮೇಶ್ವರಂ ಕೆಫೆಯ ವಿಮಾನ ನಿಲ್ದಾಣದ ಮಾರಾಟ ಮಳಿಗೆಯಲ್ಲಿ ತನಗೆ ಬಡಿಸಿದ ಊಟದಲ್ಲಿ ಹುಳು ಪತ್ತೆಯಾಗಿದೆ ಎಂದು ಗ್ರಾಹಕರೊಬ್ಬರು ಗಂಭೀರ ಆರೋಪ ಮಾಡಿದ್ದರು. ಅಲ್ಲದೆ, ತಮ್ಮ ಆಹಾರದಲ್ಲಿ ಹುಳು ಪತ್ತೆಯಾಗಿರುವ ವಿಡಿಯೋ ಸಹ ಹಂಚಿಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತಕ್ಷಣ ವೈರಲ್ ಆಗಿ, ರಾಮೇಶ್ವರಂ ಕೆಫೆ ವಿರುದ್ಧ ಟೀಕೆಗಳು ಕೇಳಿಬಂದವು.
ಆದರೆ ರಾಮೇಶ್ವರಂ ಕೆಫೆ ಈ ಆರೋಪವನ್ನು ಬಲವಾಗಿ ನಿರಾಕರಿಸಿದ್ದು ತಮ್ಮ ಬ್ರ್ಯಾಂಡ್ ಅನ್ನು ಬ್ಲ್ಯಾಕ್ಮೇಲ್ ಮಾಡಲು ಈ ಘಟನೆಯನ್ನು ರೂಪಿಸಲಾಗಿದೆ ಎಂದು ಹೇಳಿಕೊಂಡಿದೆ. ಐದರಿಂದ ಏಳು ಜನರ ಗುಂಪು ಗುರುವಾರ ಬೆಳಿಗ್ಗೆ ಔಟ್ಲೆಟ್ನಲ್ಲಿ ಗಲಾಟೆ ಮಾಡಿ ನಂತರ ವೀಡಿಯೊ ಪ್ರಸಾರವಾಗದಂತೆ ತಡೆಯಲು 25 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟಿದೆ ಎಂದು ಕೆಫೆ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಈ ಸಂಬಂಧ ರಾಮೇಶ್ವರಂ ಕೆಫೆ ಪೊಲೀಸ್ ದೂರು ದಾಖಲಿಸಿದ್ದು, ಕರೆ ದಾಖಲೆಗಳು, ಸ್ಕ್ರೀನ್ಶಾಟ್ಗಳು ಮತ್ತು ಇತರ ಪುರಾವೆಗಳನ್ನು ಸಲ್ಲಿಸಿದೆ.
ರಾಮೇಶ್ವರಂ ಕೆಫೆಯ ಸಂಸ್ಥಾಪಕಿ ದಿವ್ಯಾ ರಾಘವ್ ಈ ಆರೋಪಗಳನ್ನು “ಆಧಾರರಹಿತ” ಎಂದು ಕರೆದರು. ಈ ಹಿಂದೆಯೂ ಇದೇ ರೀತಿಯ ಬ್ಲ್ಯಾಕ್ಮೇಲ್ ಪ್ರಯತ್ನಗಳು ನಡೆದಿವೆ ಎಂದು ಹೇಳಿದರು.