ಹೊಸದಿಗಂತ ಡಿಜಿಟಲ್ ಡೆಸ್ಕ್:
ಥಾಯ್ಲೆಂಡ್ ಹಾಗೂ ಕಾಂಬೋಡಿಯಾ ನಡುವಿನ ಗಡಿಯಲ್ಲಿ ಶಿವನ ದೇವಸ್ಥಾನದ ಭೂಸ್ವಾಮ್ಯದ ವಿವಾದದ ಹಿನ್ನೆಲೆಯಲ್ಲಿ ಘರ್ಷಣೆ ಉಂಟಾಗಿ ಕನಿಷ್ಠ 13 ಮಂದಿ ಸಾವನ್ನಪ್ಪಿದ್ದಾರೆ. ಮೃತಪಟ್ಟವರಲ್ಲಿ ಹೆಚ್ಚಿನವರು ನಾಗರಿಕರಾಗಿದ್ದು, ಇಬ್ಬರು ಸೈನಿಕರೂ ಇದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಘಟನೆ ಜುಲೈ 24ರಂದು ಡ್ಯಾಂಗ್ರೆಕ್ ಪರ್ವತ ಶ್ರೇಣಿಯಲ್ಲಿ ಸಂಭವಿಸಿದೆ.
ಥಾಯ್ಲೆಂಡ್ ವಶದಲ್ಲಿರುವ ಪ್ರದೇಶದಲ್ಲಿ ಕಾಂಬೋಡಿಯಾ ಡ್ರೋನ್ ಹಾರಾಟ ನಡೆಸಿದ ಹಿನ್ನಲೆಯಲ್ಲಿ ಈ ತೀವ್ರತೆಯ ಗಲಾಟೆ ಆರಂಭವಾಗಿದೆ. ಡ್ರೋನ್ ಕಾಣಿಸಿಕೊಂಡ ಸ್ವಲ್ಪ ಹೊತ್ತಿನಲ್ಲೇ ನೆಲ ಬಾಂಬ್ ಸ್ಫೋಟ ಸಂಭವಿಸಿದ್ದು, ಐವರು ಥಾಯ್ ಸೈನಿಕರು ಗಾಯಗೊಂಡಿದ್ದಾರೆ. ಈ ಬಾಂಬ್ ಅನ್ನು ಕಾಂಬೋಡಿಯಾ ನೆಲದಲ್ಲಿ ಹೂತಿಟ್ಟಿತ್ತು ಎಂದು ಥಾಯ್ಲೆಂಡ್ ಆರೋಪಿಸಿದೆ. ಪ್ರತಿಕ್ರಿಯೆಯಾಗಿ ಥಾಯ್ ವಾಯುಪಡೆಯು BM-21 ರಾಕೆಟ್ ದಾಳಿ ಹಾಗೂ ಎಫ್-16 ಯುದ್ಧ ವಿಮಾನಗಳ ಮೂಲಕ ಏರ್ ಸ್ಟ್ರೈಕ್ ನಡೆಸಿದೆ.
ಈ ದಾಳಿಯ ಪ್ರತಿಯಾಗಿ ಕಾಂಬೋಡಿಯಾ ಕೂಡ ದಾಳಿ ನಡೆಸಿದ್ದು, ಒಟ್ಟು 800 ಕಿಲೋಮೀಟರ್‌ಗಳ ಗಡಿಭಾಗದಲ್ಲಿ ಕನಿಷ್ಠ ಆರು ಸ್ಥಳಗಳಲ್ಲಿ ಘರ್ಷಣೆಗಳು ವರದಿಯಾಗಿದೆ. ಕನಿಷ್ಠ ಒಂಬತ್ತು ಥಾಯ್ ನಾಗರಿಕರು ದಾಳಿಯಲ್ಲಿ ಮೃತರಾಗಿದ್ದು, ಮೂವರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಐದು ವರ್ಷದ ಬಾಲಕನೂ ಸೇರಿದ್ದಾರೆ. ಎರಡೂ ದೇಶಗಳು ತಮ್ಮ ಗಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಿದ್ದು, ಪ್ರವಾಸಿಗರು ಮತ್ತು ನಾಗರಿಕರಿಗೆ ಗಡಿ ದಾಟದಂತೆ ಸೂಚನೆ ನೀಡಿವೆ.
ಈ ಉದ್ವಿಗ್ನತೆಯ ಮೂಲ ಕಾರಣವಾದ ದೇವಾಲಯವು 11ನೇ ಶತಮಾನದಲ್ಲಿ ಖಮೇರ್ ರಾಜವಂಶದ ಸುರ್ಯವರ್ಮನು ನಿರ್ಮಿಸಿದ ಶಿವನ ದೇವಸ್ಥಾನವಾಗಿದೆ. ಈ ದೇವಸ್ಥಾನ ಇಂದು ಥಾಯ್ಲೆಂಡ್ ಮತ್ತು ಕಾಂಬೋಡಿಯಾ ಗಡಿಭಾಗದಲ್ಲಿ ಇದೆ. ಕಾಂಬೋಡಿಯಾ ಈ ದೇವಸ್ಥಾನ ಖಮೇರ್ ಪರಂಪರೆಯ ಭಾಗವೆಂದು ವಾದಿಸುತ್ತಿದ್ದು, ಯುನೆಸ್ಕೋ ಪರಂಪರಾ ತಾಣದ ಪಟ್ಟಿಗೆ ಸೇರಿಸಲು ಮುಂದಾಗಿದೆ. ಆದರೆ ಥಾಯ್ಲೆಂಡ್ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ವಿಚಿತ್ರ ಸಂಗತಿಯೆಂದರೆ, ಈ ಎರಡೂ ರಾಷ್ಟ್ರಗಳು ಬೌದ್ಧ ಧರ್ಮದ ಬಹುಸಂಖ್ಯಾತ ದೇಶಗಳಾಗಿವೆ. ಮೂಲತಃ ಹಿಂದೂ ಶೈವ ದೇವಾಲಯವಾಗಿದ್ದ ಈ ಕ್ಷೇತ್ರ, ಕಾಲಕ್ರಮೇಣ ಬೌದ್ಧ ಧಾರ್ಮಿಕ ಚಟುವಟಿಕೆಗಳಿಗೆ ಕೇಂದ್ರವಾಗಿದ್ದು, ರಾಜ ಜಯವರ್ಮನ್ VII ಸಮಯದಲ್ಲಿ ಇದರಲ್ಲಿ ಧರ್ಮಶಾಲೆಗಳೂ ಸೇರಿಸಲ್ಪಟ್ಟವು. ಇತಿಹಾಸ, ಧರ್ಮ ಹಾಗೂ ಗಡಿಭಾಗದ ಸ್ವಾರಸ್ಯದಿಂದ ಈ ವಿವಾದ ಹೆಚ್ಚು ಸ್ಫೋಟಕ ರೂಪ ಪಡೆದುಕೊಂಡಿದೆ.