ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋವಿಡ್ ನಂತರ ದೇಶದೆಲ್ಲೆಡೆ ಒಟಿಟಿ ಮತ್ತು ಮನರಂಜನಾ ಆಪ್ಗಳ ಬಳಕೆ ಹೆಚ್ಚಾಗಿದೆ. ಅಮೆಜಾನ್ ಪ್ರೈಮ್, ನೆಟ್ಫ್ಲಿಕ್ಸ್, ಡಿಸ್ನಿ ಹಾಟ್ಸ್ಟಾರ್, ಜೀ5, ವೂಟ್, ಆಪಲ್ ಟಿವಿ ಮುಂತಾದ ಪ್ರಮುಖ ಒಟಿಟಿಗಳ ಜೊತೆಗೆ ಉಲ್ಲು, ಆಲ್ಟ್ ಬಾಲಾಜಿ ಮುಂತಾದ ಸ್ಥಳೀಯ ಆಪ್ಗಳೂ ಜನಪ್ರಿಯತೆ ಗಳಿಸಿದ್ದವು. ಆದರೆ, ಇವುಗಳಲ್ಲಿ ಕೆಲವು ಅಪ್ಲಿಕೇಶನ್ಗಳು ಅಶ್ಲೀಲತೆ ಮತ್ತು ಅಸಭ್ಯತೆಯ ಮೂಲಕ ಲಾಭ ಗಳಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಇದೀಗ ಅಂತಹ 25 ಒಟಿಟಿ ಮತ್ತು ಅಪ್ಲಿಕೇಶನ್ಗಳ ಮೇಲೆ ನಿಷೇಧ ಹೇರಿದೆ.
ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ಹೊರಡಿಸಲಾದ ಆದೇಶದಂತೆ, ಉಲ್ಲು, ಆಲ್ಟ್ ಬಾಲಾಜಿ ಸೇರಿದಂತೆ ಬಿಗ್ ಶಾಟ್ಸ್, ದೇಸಿ ಫ್ಲಿಕ್ಸ್, ಹಾಟ್ ಎಕ್ಸ್ ವಿಐಪಿ, ನವರಸ ಲೈಟ್, ಶೋ ಎಕ್ಸ್, ಬುಲ್ ಆಪ್, ಕಂಗನಾ ಆಪ್, ಮೋಜ್ಫ್ಲಿಕ್ಸ್, ಬೂಮೆಕ್ಸ್, ಹಲ್ಚಲ್ ಆಫ್, ಜಲ್ವಾ ಆಪ್ ಮುಂತಾದ ಒಟ್ಟು 25 ಅಪ್ಲಿಕೇಶನ್ಗಳ ಕಾರ್ಯಾಚರಣೆಗೆ ತಾತ್ಕಾಲಿಕ ಬ್ರೇಕ್ ಹಾಕಲಾಗಿದೆ. ಈ ನಿಷೇಧ ಭಾರತದಲ್ಲಿಗಷ್ಟೇ ಸೀಮಿತವಾಗಿದ್ದು, ಇವುಗಳು ವಿದೇಶದಲ್ಲಿ ಮಾತ್ರ ಕಾರ್ಯನಿರ್ವಹಿಸಬಹುದು.
ಈ ಒಟಿಟಿಗಳು ಭಾರತದ ಪ್ರಸಾರ ಕಾನೂನು ಉಲ್ಲಂಘಿಸಿ ನಿರಂತರವಾಗಿ ಅಶ್ಲೀಲ ಮತ್ತು ನೈತಿಕ ಮೌಲ್ಯವಿಲ್ಲದ ಕಂಟೆಂಟ್ಗಳನ್ನು ವೀಕ್ಷಕರಿಗೆ ಒದಗಿಸುತ್ತಿದ್ದವು. ಹಲವಾರು ಬಾರಿ ಸಾರ್ವಜನಿಕರಿಂದ ದೂರುಗಳು ಬಂದಿದ್ದರೂ ನಿರ್ದಿಷ್ಟ ಕ್ರಮ ತೆಗೆದುಕೊಳ್ಳಲಾಗಿರಲಿಲ್ಲ. ಇದೀಗ ಕೇಂದ್ರ ಸರ್ಕಾರವು ಗಂಭೀರ ಕ್ರಮವನ್ನೇ ಕೈಗೊಂಡಿದೆ.
ಟಿವಿ ಲೋಕದಲ್ಲಿ ದೊಡ್ಡ ಹೆಸರು ಹೊಂದಿರುವ ಏಕ್ತಾ ಕಪೂರ್ ಅವರ ಆಲ್ಟ್ ಬಾಲಾಜಿಯ ಮೇಲೂ ಈ ನಿಷೇಧದ ಪರಿಣಾಮ ಬೀರಿದ್ದು, ಅವರು ಸರ್ಕಾರದ ಈ ನಿರ್ಧಾರದ ವಿರುದ್ಧ ಕಾನೂನು ಹೋರಾಟಕ್ಕಿಳಿಯುವ ಸಾಧ್ಯತೆಯಿದೆ. ಮುಂದಿನ ದಿನಗಳಲ್ಲಿ ಈ ವಿವಾದವು ನ್ಯಾಯಾಲಯದ ಮೆಟ್ಟಿಲೇರಬೇಕಾದ ಸಾಧ್ಯತೆಯೂ ಉಂಟು.