ಶೀಘ್ರದಲ್ಲೇ ನ್ಯಾ. ಯಶವಂತ್ ವರ್ಮಾ ಪದಚ್ಯುತಿಗೆ ಲೋಕಸಭೆಯಲ್ಲಿ ಪ್ರಕ್ರಿಯೆ ಪ್ರಾರಂಭ: ಕಿರಣ್ ರಿಜಿಜು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರನ್ನು ವಜಾಗೊಳಿಸಲು ಲೋಕಸಭೆ ಶೀಘ್ರದಲ್ಲೇ ಪ್ರಕ್ರಿಯೆಗಳನ್ನು ಪ್ರಾರಂಭಿಸಲಿದೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಇಂದು ತಿಳಿಸಿದ್ದಾರೆ.

ಅಕ್ರಮ ನಗದು ಪತ್ತೆ ಪ್ರಕರಣದಲ್ಲಿ ರಾಜ್ಯಸಭೆಯಲ್ಲಿ ಇದೇ ರೀತಿಯ ಪ್ರಸ್ತಾವನೆಗೆ ವಿರೋಧ ಪಕ್ಷಗಳು ಸಲ್ಲಿಸಿದ್ದ ನೋಟಿಸ್‌ಗೆ ಅಂಗೀಕಾರ ದೊರೆಯಲಿಲ್ಲ. ಇದರ ನಂತರ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿರುವ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರನ್ನು ಪದಚ್ಯುತಗೊಳಿಸಲು ಲೋಕಸಭೆಯಲ್ಲಿ ದ್ವಿಪಕ್ಷೀಯ ನಿರ್ಣಯವನ್ನು ಆರಂಭಿಸಲಾಗುವುದು. ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಪ್ರಕರಣದಲ್ಲಿ ಒಗ್ಗಟ್ಟಿನಿಂದ ಮುಂದುವರಿಯುವುದು ಎಲ್ಲಾ ರಾಜಕೀಯ ಪಕ್ಷಗಳ ಸರ್ವಾನುಮತದ ನಿರ್ಧಾರ ಎಂದು ಹೇಳಿದ್ದಾರೆ.

152 ಸಂಸದರು ಸಹಿ ಮಾಡಿರುವ ಪ್ರಸ್ತಾವನೆಯನ್ನು ಲೋಕಸಭೆಯಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ಪ್ರತಿಪಾದಿಸಿದ್ದಾರೆ.

ಯಶವಂತ್ ವರ್ಮಾ ವಿರುದ್ಧದ ಆರೋಪಗಳನ್ನು ಪರಿಶೀಲಿಸಲು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ತ್ರಿಸದಸ್ಯ ತನಿಖಾ ಸಮಿತಿಯನ್ನು ಘೋಷಿಸುವ ನಿರೀಕ್ಷೆಯಿದೆ. ನ್ಯಾಯಾಧೀಶರ (ವಿಚಾರಣಾ) ಕಾಯ್ದೆಯ ಪ್ರಕಾರ, ಒಂದೇ ದಿನ ಎರಡೂ ಸದನಗಳಲ್ಲಿ ನೋಟಿಸ್‌ಗಳನ್ನು ಸಲ್ಲಿಸಿದರೆ ಆರೋಪಗಳ ತನಿಖೆಗಾಗಿ ಸಮಿತಿಯನ್ನು ಲೋಕಸಭೆ ಜಂಟಿಯಾಗಿ ರಚಿಸಬೇಕು.

ದೆಹಲಿಯಲ್ಲಿ ನ್ಯಾಯಮೂರ್ತಿ ಯಶವಂತ್ ವರ್ಮಾ ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಅವರ ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಆಗ ಅವರ ಮನೆಯವರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದರು. ಅಗ್ನಿಶಾಮಕ ದಳದವರು ಬಂದು ಬೆಂಕಿಯನ್ನು ಆರಿಸುವಾಗ ಮನೆಯ ಒಂದು ಕೊಠಡಿಯಲ್ಲಿ ಅರೆಬರೆ ಸುಟ್ಟ ಕಂತೆಗಟ್ಟಲೆ ನೋಟುಗಳು ಕಾಣಿಸಿಕೊಂಡಿದ್ದವು. ಈ ಬಗ್ಗೆ ಅಗ್ನಿಶಾಮಕ ದಳದ ಅಧಿಕಾರಿಗಳು ಮಾಹಿತಿ ನೀಡಿದ್ದರು. ಇದಾದ ನಂತರ ಯಾವುದೇ ಮೂಲಗಳಿಲ್ಲದ ಅಪಾರ ಪ್ರಮಾಣದ ಹಣ ಪತ್ತೆಯಾಗಿದ್ದು ಯಶವಂತ್ ವರ್ಮಾ ಭ್ರಷ್ಟಾಚಾರವೆಸಗಿದ್ದಾರೆ ಎಂಬ ಆರೋಪಕ್ಕೆ ಕಾರಣವಾಯಿತು. ಬಳಿಕ ದೆಹಲಿಯಿಂದ ಅವರನ್ನು ಅಲಹಾಬಾದ್ ಹೈಕೋರ್ಟ್​ಗೆ ವರ್ಗಾವಣೆ ಮಾಡಲಾಯಿತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!