ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದಲ್ಲಿ ಸಂಪೂರ್ಣವಾಗಿ ಅಥವಾ ಭಾಗಶಃ 42,517 ಕೋಟಿ ರೂ. ವೆಚ್ಚದ 3,264 ಕಿ.ಮೀ ಉದ್ದದ 25 ಯೋಜನೆಗಳು (15 ಹೊಸ ಮಾರ್ಗಗಳು, 10 ಜೋಡಿ ಮಾರ್ಗ) ಮಂಜೂರಾಗಿದ್ದು, ಅವುಗಳಲ್ಲಿ 1,394 ಕಿ.ಮೀ ಉದ್ದ ಯೋಜನೆಗಳು ಕಾರ್ಯಾರಂಭ ಮಾಡಿವೆ. 2025ರ ಮಾರ್ಚ್‌ವರೆಗೆ 21,310 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ರಾಜ್ಯಸಭೆಯಲ್ಲಿ ಅಜಯ್ ಮಾಕನ್ ಮತ್ತು ಮೋಹನ್ ಪಾಟೀಲ್ ಅವರ ಚುಕ್ಕಿ ಪ್ರಶ್ನೆಗಳಿಗೆ ರೈಲ್ವೆ ಸಚಿವರು ಉತ್ತರ ನೀಡಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಪೂರ್ಣವಾಗಿ/ಭಾಗಶಃ 7,072 ಕಿ.ಮೀ ಉದ್ದದ ಒಟ್ಟು 64 ಯೋಜನೆಗಳ (25 ಹೊಸ ಮಾರ್ಗಗಳು ಮತ್ತು 39 ಜೋಡಿ ಮಾರ್ಗ) ಸಮೀಕ್ಷೆಯನ್ನು ಕಳೆದ ಮೂರು ವರ್ಷಗಳಲ್ಲಿ (2022-2023, 2023-24, 2024-25 ಮತ್ತು ಪ್ರಸ್ತುತ ಹಣಕಾಸು ವರ್ಷ 2025-26) ಮಂಜೂರು ಮಾಡಲಾಗಿದೆ.
ಜೊತೆಗೆ ಹೆಜ್ಜಾಲ-ಚಾಮರಾಜನಗರ ಹೊಸ ಮಾರ್ಗ ಯೋಜನೆಗೆ ವೆಚ್ಚ ಹಂಚಿಕೆ ಆಧಾರದ ಮೇಲೆ ಅನುಮೋದನೆ ನೀಡಲಾಗಿದೆ. ಆದಾಗ್ಯೂ, ಕರ್ನಾಟಕ ಸರ್ಕಾರವು ಈ ಯೋಜನೆಗೆ ಒಪ್ಪಿಗೆ ನೀಡದ ಕಾರಣ ಈ ಯೋಜನೆಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು.
ಯಶವಂತಪುರ-ಚನ್ನಸಂದ್ರ ಮತ್ತು ಬೈಯಪ್ಪನಹಳ್ಳಿ-ಹೊಸೂರು ಜೋಡಿ ಮಾರ್ಗ ಯೋಜನೆಗಳನ್ನು ಕರ್ನಾಟಕ ರಾಜ್ಯ ಸರ್ಕಾರದ ನಿಯಂತ್ರಿತ ಕಂಪನಿಯಾದ ರೈಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಕಂಪನಿ (ಕರ್ನಾಟಕ) ಲಿಮಿಟೆಡ್ (ಕೆ-ರೈಡ್) ನಿರ್ವಹಿಸುತ್ತಿದೆ. ಯೋಜನೆಗಳ ಪ್ರಗತಿ ಮತ್ತು ಪೂರ್ಣಗೊಳಿಸುವಿಕೆಯು ಭೂಸ್ವಾಧೀನ, ಸೌಲಭ್ಯಗಳ ಸ್ಥಳಾಂತರ, ಅರಣ್ಯ ಅನುಮತಿ, ಮರಗಳನ್ನು ಕಡಿಯಲು ಅನುಮತಿ ಇತ್ಯಾದಿಗಳನ್ನು ಅವಲಂಬಿಸಿರುತ್ತದೆ ಎಂದು ಹೇಳಿದರು.
ಭಾರತೀಯ ರೈಲ್ವೆ ವಲಯವು ರಾಜ್ಯ/ಜಿಲ್ಲಾ ಗಡಿಗಳನ್ನು ಅಥವಾ ಪ್ರಾದೇಶಿಕ ಪರಿಗಣನೆಯನ್ನು ಆಧರಿಸಿಲ್ಲ. ಒಂದಕ್ಕಿಂತ ಹೆಚ್ಚು ವಲಯಗಳು ಬರುವ ಹಲವು ರಾಜ್ಯಗಳಿವೆ. ಕರ್ನಾಟಕದ ಕರಾವಳಿ ಪ್ರದೇಶಕ್ಕೆ ಪ್ರಸ್ತುತ ರೈಲ್ವೆ ಆಡಳಿತ ವ್ಯವಸ್ಥೆಯು ತೃಪ್ತಿಕರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ರೈಲ್ವೆ ಸಚಿವರು ಹೇಳಿದರು.
ಭಾರತೀಯ ರೈಲ್ವೆ ಜಾಲದಲ್ಲಿ ಮಂಗಳೂರು ಮತ್ತು ಕಾರವಾರ ಅಸ್ತಿತ್ವದಲ್ಲಿರುವ ರೈಲ್ವೆ ನಿಲ್ದಾಣಗಳಾಗಿವೆ. ಮಂಗಳೂರು ಮತ್ತು ಕಾರವಾರಕ್ಕೆ ಸಂಪರ್ಕವನ್ನು ಮತ್ತಷ್ಟು ಸುಧಾರಿಸಲು, 04 ಸಮೀಕ್ಷೆಗಳು ಅಂದರೆ (i) ಶಿವಮೊಗ್ಗ-ಶೃಂಗೇರಿ-ಮಂಗಳೂರು ಹೊಸ ಮಾರ್ಗ ಯೋಜನೆ (332 ಕಿಮೀ), (ii) ಹಾಸನ – ಮಂಗಳೂರು ಜೋಡಿಮಾರ್ಗ ಯೋಜನೆ (247 ಕಿಮೀ), (iii) ಶೋರನೂರು-ಮಂಗಳೂರು 3ನೇ ಮತ್ತು 4ನೇ ಮಾರ್ಗ ಯೋಜನೆ (307 ಕಿಮೀ) ಮತ್ತು (iv) ಹುಬ್ಬಳ್ಳಿ – ಅಂಕೋಲಾ ಹೊಸ ಜೋಡಿ ಮಾರ್ಗ (163 ಕಿಮೀ) ಮಂಜೂರು ಮಾಡಲಾಗಿದೆ.
ರೈಲ್ವೆ ಯೋಜನೆಗಳನ್ನು ವಲಯ ರೈಲ್ವೆವಾರು ಸಮೀಕ್ಷೆ/ಮಂಜೂರು/ ಕಾರ್ಯಗತಗೊಳಿಸಲಾಗುತ್ತದೆ. ಅವುಗಳನ್ನು ರಾಜ್ಯವಾರು/ ಕೇಂದ್ರಾಡಳಿತ ಪ್ರದೇಶವಾರು/ ಜಿಲ್ಲಾವಾರು ಮಾಡಲಾಗುವುದಿಲ್ಲ. ಏಕೆಂದರೆ ರಾಜ್ಯ ಸರ್ಕಾರಗಳು, ಕೇಂದ್ರ ಸಚಿವಾಲಯಗಳು, ಸಂಸತ್ ಸದಸ್ಯರು, ಇತರ ಸಾರ್ವಜನಿಕ ಪ್ರತಿನಿಧಿಗಳು ಎತ್ತಿದ ಬೇಡಿಕೆಗಳು, ರೈಲ್ವೆಯ ಸ್ವಂತ ಕಾರ್ಯಾಚರಣೆಯ ಅವಶ್ಯಕತೆ, ಸಾಮಾಜಿಕ-ಆರ್ಥಿಕ ಪರಿಗಣನೆಗಳು ಇತ್ಯಾದಿಗಳ ಆಧಾರದ ಮೇಲೆ ಮಂಜೂರು ಮಾಡಲಾಗುತ್ತದೆ. ಇದು ನಡೆಯುತ್ತಿರುವ ಯೋಜನೆಗಳು ಮುಂದಕ್ಕೆ ಹೋಗುವಿಕೆ ಮತ್ತು ನಿಧಿಯ ಒಟ್ಟಾರೆ ಲಭ್ಯತೆಯನ್ನು ಅವಲಂಬಿಸಿರುತ್ತದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯದಲ್ಲಿ ಸಂಪೂರ್ಣವಾಗಿ/ಭಾಗಶಃ ನಡೆಯುವ ರೈಲ್ವೆ ಮೂಲಸೌಕರ್ಯ ಯೋಜನೆಗಳು ಭಾರತೀಯ ರೈಲ್ವೆಯ ನೈಋತ್ಯ ರೈಲ್ವೆ (ಎಸ್ ಡಬ್ಲ್ಯು ಆರ್ ), ಮಧ್ಯ ರೈಲ್ವೆ (ಸಿ ಆರ್), ದಕ್ಷಿಣ ರೈಲ್ವೆ (ಎಸ್ ಅರ್) ಮತ್ತು ದಕ್ಷಿಣ ಮಧ್ಯ ರೈಲ್ವೆ (ಎಸ್ ಸಿ ಆರ್) ವಲಯಗಳ ವ್ಯಾಪ್ತಿಗೆ ಬರುತ್ತವೆ. ರೈಲ್ವೆ ಯೋಜನೆಗಳ ವಲಯವಾರು ವಿವರಗಳನ್ನು ಭಾರತೀಯ ರೈಲ್ವೆಯ ವೆಬ್‌ಸೈಟ್ ನಲ್ಲಿ ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡಲಾಗಿದೆ ಎಂದು ಹೇಳಿದರು.