ಸಾಮಾನ್ಯವಾಗಿ ಟೊಮೆಟೊ ಉಪಯೋಗಿಸಿ ಸಾಂಬಾರ್, ರಸಂ ಅಥವಾ ಚಟ್ನಿ ಮಾಡುವುದು ನಾವು ನೋಡಿರುತ್ತೇವೆ. ಆದರೆ, ಅದೇ ಟೊಮೆಟೋದಿಂದ ವಿಭಿನ್ನ ಶೈಲಿಯಲ್ಲಿ ಗೊಜ್ಜು ತಯಾರಿಸಬಹುದು ಅನ್ನೋದು ಗೊತ್ತಿದ್ಯಾ?. ಈ ಟೊಮೆಟೊ ಗೊಜ್ಜು ದೋಸೆ, ಇಡ್ಲಿ ಜೊತೆ ತುಂಬಾ ಚೆನ್ನಾಗಿರುತ್ತೆ.
ಬೇಕಾಗುವ ಪದಾರ್ಥಗಳು:
ಟೊಮೆಟೊ – 2
ಈರುಳ್ಳಿ – 1
ಜೀರಿಗೆ, ಸಾಸಿವೆ- 1 ಚಮಚ
ಅಡುಗೆ ಎಣ್ಣೆ – 3 ಚಮಚ
ಮೆಣಸಿನ ಕಾಯಿ -2
ಉಪ್ಪು – ರುಚಿಗೆ ತಕ್ಕಷ್ಟು
ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ತೆಂಗಿನ ಕಾಯಿ ತುರಿ – ಒಂದು ಸಣ್ಣ ಬೌಲ್
ಗಸಗಸೆ – ಅರ್ಧ ಚಮಚ
ಕೊತ್ತಂಬರಿ ಸೊಪ್ಪು -ಸ್ವಲ್ಪ
ಮಾಡುವ ವಿಧಾನ:
ಮೊದಲಿಗೆ ಮಿಕ್ಸಿಗೆ ತೆಂಗಿನಕಾಯಿ ತುರಿ ಮತ್ತು ಗಸಗಸೆ ಹಾಕಿ ಸ್ವಲ್ಪ ನೀರು ಬೆರೆಸಿ ಪೇಸ್ಟ್ ಮಾಡಿ, ಬದಿಗಿಡಿ.
ಈಗ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಅದರಲ್ಲಿ ಜೀರಿಗೆ ಮತ್ತು ಸಾಸಿವೆ ಹಾಕಿ, ಹಸಿಮೆಣಸು ಅಥವಾ ಕೆಂಪು ಮೆಣಸಿನಕಾಯಿ, ಈರುಳ್ಳಿ ಹಾಗೂ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹುರಿಯಿರಿ.
ಈರುಳ್ಳಿಯ ಬಣ್ಣ ಬದಲಾದ ಬಳಿಕ ಕತ್ತರಿಸಿದ ಟೊಮೆಟೊ ಹಾಕಿ ಚೆನ್ನಾಗಿ ಮೃದುವಾಗುವವರೆಗೆ ಬೇಯಿಸಿರಿ. ಬಳಿಕ ಈ ಮಿಶ್ರಣಕ್ಕೆ ಮಾಡಿಟ್ಟ ತೆಂಗಿನಕಾಯಿ ಪೇಸ್ಟ್ ಸೇರಿಸಿ. ಸ್ವಲ್ಪ ನೀರು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಮಧ್ಯಮ ಉರಿಯಲ್ಲಿ 10-15 ನಿಮಿಷ ಮುಚ್ಚಿದ ಬಾಣಲೆಯಲ್ಲಿ ಬೇಯಿಸಿ. ಕೊನೆಗೆ ಕೊತ್ತಂಬರಿ ಸೊಪ್ಪು ಹಾಕಿದರೆ ಬಿಸಿ ಬಿಸಿ ಟೊಮೆಟೊ ಗೊಜ್ಜು ಸವಿಯಲು ಸಿದ್ಧ.