ಹೊಸದಿಗಂತ ಡಿಜಿಟಲ್ ಡೆಸ್ಕ್
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ನಟ ದರ್ಶನ್‌ಗೆ ಜಾಮೀನಿನ ವಿಚಾರದಲ್ಲಿ ಮತ್ತಷ್ಟು ಟೆನ್ಷನ್ ಹೆಚ್ಚಿದೆ. ಜುಲೈ 24ರಂದು ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಏಳು ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ಈ ವೇಳೆ ಸುಪ್ರೀಂ ಕೋರ್ಟ್ ಹೈಕೋರ್ಟ್ ತೀರ್ಪಿನ ಬಗ್ಗೆ ಗಂಭೀರವಾಗಿ ಪ್ರಶ್ನೆ ಎತ್ತಿದ್ದು, ಜಾಮೀನಿಗೆ ಸಂಬಂಧಿಸಿದ ನಿರ್ಧಾರವನ್ನು ಪರಿಶೀಲಿಸುತ್ತಿದೆ. ಇದರಿಂದ ದರ್ಶನ್ ಸಹಿತ ಡಿ ಗ್ಯಾಂಗ್‌ನಲ್ಲಿ ಜಾಮೀನು ರದ್ದಾಗುವ ಭೀತಿ ಉಂಟಾಗಿದೆ.
ಈ ಮಧ್ಯೆ ಸಿನಿಮಾ ಶೂಟಿಂಗ್‌ಗೆ ಥೈಲ್ಯಾಂಡ್‌ಗೆ ತೆರಳಿದ್ದ ನಟ ದರ್ಶನ್ ಇದೀಗ ವಿದೇಶದಿಂದ ವಾಪಸ್ಸಾಗಿದ್ದಾರೆ. ಜುಲೈ 25ರ ರಾತ್ರಿ 11:45ಕ್ಕೆ ಥೈಲ್ಯಾಂಡ್‌ನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಈ ವೇಳೆ ಪತ್ನಿ ವಿಜಯಲಕ್ಷ್ಮಿ ಹಾಗೂ ಆತ್ಮೀಯ ಸ್ನೇಹಿತ ಧನ್ವೀರ್ ಜೊತೆಗಿದ್ದ ದರ್ಶನ್, ವಿಮಾನ ನಿಲ್ದಾಣದಿಂದ ಹೊರಟ ನಂತರ ಕಾರಿನಲ್ಲಿ ತಮ್ಮ ನಿವಾಸದತ್ತ ಹೊರಟರು.
ಸುಪ್ರೀಂ ಕೋರ್ಟ್ ವಿಚಾರಣೆ ವೇಳೆ ನ್ಯಾಯಮೂರ್ತಿ ಪರ್ದಿವಾಲಾ, “ಹೈಕೋರ್ಟ್ ಈ ರೀತಿಯ ತೀರ್ಪುಗಳನ್ನು ಇತರ ಪ್ರಕರಣಗಳಲ್ಲಿ ನೀಡುತ್ತಾ?” ಎಂಬ ಪ್ರಶ್ನೆಯನ್ನು ಎತ್ತಿದ್ದರು. ಹೀಗಾಗಿ ಈ ತೀರ್ಪು ಜಾರಿ ವಿಚಾರದ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ.
ಜಾಮೀನು ತೀರ್ಪು ಮುಂದಿನ 10 ದಿನಗಳಲ್ಲಿ ಹೊರಬರಲಿದೆ ಎಂದು ಹೇಳಲಾಗಿದ್ದು, ಈ ತೀರ್ಪು ದರ್ಶನ್ ಹಾಗೂ ಸಹ ಆರೋಪಿ ಪವಿತ್ರಾ ಗೌಡರ ಭವಿಷ್ಯ ನಿರ್ಧರಿಸಲಿದೆ. ಅದೇ ರೀತಿ, ಥೈಲ್ಯಾಂಡ್‌ನಲ್ಲಿ ದರ್ಶನ್ ಕೊಲೆ ಆರೋಪಿಯ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದ್ದಾರೋ ಎಂಬುದೂ ಹೊಸ ಚರ್ಚೆಗೆ ಕಾರಣವಾಗಿದೆ.
ಇದೀಗ ದರ್ಶನ್ ವಿರುದ್ಧದ ಮಿಡಿಯಾ, ನ್ಯಾಯಾಂಗ ಹಾಗೂ ಸಾರ್ವಜನಿಕ ಚರ್ಚೆಗಳು ಮತ್ತಷ್ಟು ತೀವ್ರಗೊಳ್ಳುತ್ತಿರುವಂತಾಗಿದೆ.