ಮಾನವನ ದೇಹದಲ್ಲಿನ ರಕ್ತ ಶುದ್ಧವಾಗಿದ್ದರೆ ಪ್ರತಿಯೊಂದು ಅಂಗವೂ ಸರಿಯಾಗಿ ಕಾರ್ಯನಿರ್ವಹಿಸುತ್ತದೆ. ಆದರೆ ಆಧುನಿಕ ಆಹಾರ ಕ್ರಮ, ಮಾಲಿನ್ಯ ಮತ್ತು ಒತ್ತಡದ ಕಾರಣದಿಂದಾಗಿ ದೇಹದಲ್ಲಿ ಕಲ್ಮಶ ಜಮೆಯಾಗುವುದು ಸಾಮಾನ್ಯ. ಆಯುರ್ವೇದದ ಪ್ರಕಾರ ಕೆಲವೊಂದು ಸರಳ ಮನೆಮದ್ದುಗಳು ದೇಹದಿಂದ ವಿಷಕಾರಕದ್ರವ್ಯಗಳನ್ನು ತೆಗೆದುಹಾಕಿ ರಕ್ತವನ್ನು ಶುದ್ಧೀಕರಿಸಲು ನೆರವಾಗುತ್ತವೆ. ಇಲ್ಲಿವೆ ಅಂತಹ ಕೆಲವು ಮನೆಮದ್ದುಗಳು:
ಅರಿಶಿನ ಹಾಲು
ಅರಿಶಿನವು ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಅದರಲ್ಲಿರುವ ‘ಕರ್ಕ್ಯುಮಿನ್’ ಎಂಬ ತತ್ವಾಂಶ ಯಕೃತ್ತಿನ ಶುದ್ಧೀಕರಣಕ್ಕೆ ನೆರವಾಗುತ್ತದೆ. ಪ್ರತಿದಿನ ಒಂದು ಲೋಟ ಬೆಚ್ಚಗಿನ ಹಾಲಿನಲ್ಲಿ ಸ್ವಲ್ಪ ಅರಿಶಿನ ಬೆರೆಸಿ ಕುಡಿಯುವುದು ಉತ್ತಮ.
ಬೀಟ್ರೂಟ್ ರಸ
ಬೀಟ್ರೂಟ್ ರಕ್ತಹರಿವನ್ನು ಸುಧಾರಿಸಿ, ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಬೀಟ್ರೂಟ್ ತುಂಡುಗಳನ್ನು ನೀರಿನಲ್ಲಿ ಬೇರೆಸಿ ಜ್ಯೂಸ್ ತಯಾರಿಸಿ ಕುಡಿಯುವುದು ದೇಹಕ್ಕೆ ಶುದ್ಧತೆಯನ್ನು ನೀಡುತ್ತದೆ.
ಆಪಲ್ ಸೈಡರ್ ವಿನೆಗರ್ ಮತ್ತು ಅಡುಗೆ ಸೋಡಾ
ಈ ಸಂಯೋಜನೆಯು ದೇಹದ pH ಮಟ್ಟವನ್ನು ಸಮತೋಲನಗೊಳಿಸಿ, ಯೂರಿಕ್ ಆಮ್ಲದ ವಿಸರ್ಜನೆಗೆ ಕಾರಣವಾಗುತ್ತದೆ. ಒಂದು ಲೋಟ ನೀರಿನಲ್ಲಿ 3 ಚಮಚ ಆಪಲ್ ವಿನೆಗರ್ ಮತ್ತು 1 ಚಮಚ ಅಡುಗೆ ಸೋಡಾ ಬೆರೆಸಿ ಕುಡಿಯುವುದು ಶ್ರೇಷ್ಠ.
ನಿಂಬೆ ರಸ
ನಿಂಬೆ ರಸವು ದೇಹವನ್ನು ಡಿಟಾಕ್ಸ್ ಮಾಡುತ್ತೆ. ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ನಿಂಬೆ ರಸ ಬೆರೆಸಿ, ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಜೀರ್ಣ ಕ್ರಿಯೆ ಉತ್ತಮವಾಗುತ್ತದೆ ಮತ್ತು ರಕ್ತ ಶುದ್ಧವಾಗುತ್ತದೆ.
ಬೇವಿನ ರಸ
ಬೇವಿನ ಎಲೆಗಳು ನಿರ್ವಿಷಗೊಳಿಸುವ ಶಕ್ತಿಯುಳ್ಳವು. ಒಂದಿಷ್ಟು ಎಲೆಗಳನ್ನು ನೀರಿನಲ್ಲಿ ಬೇರೆಸಿ ರಸ ಮಾಡಿಕೊಳ್ಳಿ. ಈ ರಸವನ್ನು ವಾರಕ್ಕೆ 2-3 ಬಾರಿ ಕುಡಿದರೆ ಯಕೃತ್ ಮತ್ತು ರಕ್ತ ಶುದ್ಧೀಕರಣಕ್ಕೆ ಸಹಾಯಕ.
ಆರೋಗ್ಯಕರ ಆಹಾರ ಸೇವನೆ
ಹಸಿ ತರಕಾರಿಗಳು, ಹಣ್ಣುಗಳು, ಕಡಿಮೆ ಖಾರದ ಖಾದ್ಯಗಳು, ಫೈಬರ್‌ಪೂರ್ಣ ಆಹಾರಗಳು ದೇಹಕ್ಕೆ ಲಘು ಹಾಗೂ ಶುದ್ಧತೆಯನ್ನು ನೀಡುತ್ತವೆ. ಮಸಾಲೆ, ತೈಲ, ಹೆಚ್ಚು ಸಿಹಿ ಪದಾರ್ಥಗಳಿಂದ ದೂರವಿರುವುದು ಉತ್ತಮ.
ನಿಯಮಿತ ನೀರು ಸೇವನೆ
ಪ್ರತಿದಿನ ಕನಿಷ್ಠ 2.5 ರಿಂದ 3 ಲೀಟರ್ ನೀರು ಕುಡಿಯುವುದರಿಂದ ದೇಹದಲ್ಲಿನ ತ್ಯಾಜ್ಯಗಳೆಲ್ಲ ನೈಸರ್ಗಿಕವಾಗಿ ಹೊರಹೋಗುತ್ತವೆ. ಇದು ದೇಹದ ನೈಸರ್ಗಿಕ ಡಿಟಾಕ್ಸ್ ಪ್ರಕ್ರಿಯೆಗೆ ಸಹಾಯ ಮಾಡುತ್ತದೆ.
ಈ ಎಲ್ಲಾ ಮನೆಮದ್ದುಗಳು ಸಾಮಾನ್ಯ ಆರೋಗ್ಯ ಮಾಹಿತಿ ಆಧಾರಿತವಾಗಿವೆ. ಯಾವುದೇ ಆರೋಗ್ಯ ಸಮಸ್ಯೆ ಇದ್ದರೆ, ಈ ಮದ್ದುಗಳನ್ನು ಆರಂಭಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಸೂಕ್ತ. (Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಸಮಸ್ಯೆಗಾಗಿ ತಜ್ಞರನ್ನು ಸಂಪರ್ಕಿಸಿ.)