ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹು ನಿರೀಕ್ಷಿತ ಹಿಂದಿ ರಿಯಾಲಿಟಿ ಶೋ ಬಿಗ್ ಬಾಸ್ 19 ಪ್ರೇಕ್ಷಕರನ್ನು ಮನೋರಂಜಿಸಲು ಸಜ್ಜಾಗಿದೆ. ಈ ಬಾರಿ ಶೋನ ಲೋಗೋ ಹಾಗೂ ಥೀಮ್‌ನಲ್ಲಿ ಮಹತ್ತರ ಬದಲಾವಣೆಗಳನ್ನು ತರಲಾಗಿದೆ. ಬಿಗ್ ಬಾಸ್ 19ರ ಮೊದಲ ಲುಕ್ ಜಿಯೋ ಹಾಟ್‌ಸ್ಟಾರ್‌ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬಹಿರಂಗಪಡಿಸಿದ್ದಾರೆ.
ಈ ಬಾರಿ ಬಿಗ್ ಬಾಸ್ ಲೋಗೋ ಸಂಪೂರ್ಣ ಬದಲಾಗಿದ್ದು, ಆಕರ್ಷಕ ವರ್ಣಮಯ ವಿನ್ಯಾಸದೊಂದಿಗೆ ಹೊಸ ಶೈಲಿಯ ತಿರುವು ಪಡೆಯಲಿದೆ. ಕಾರ್ಯಕ್ರಮವು ಆಗಸ್ಟ್ 2025ರಲ್ಲಿ ಆರಂಭಗೊಳ್ಳಲಿದ್ದು, ಆರಂಭದ ಮೂರು ತಿಂಗಳು ಸಲ್ಮಾನ್ ಖಾನ್ ನಿರೂಪಕರಾಗಿ ಮುಂದುವರೆಯಲಿದ್ದಾರೆ. ನಂತರ ಫರಾ ಖಾನ್, ಕರಣ್ ಜೋಹರ್ ಹಾಗೂ ಅನಿಲ್ ಕಪೂರ್ ಕೂಡ ಕಾರ್ಯಕ್ರಮ ನಿರೂಪಿಸಲಿದ್ದಾರೆ ಎಂಬ ಮಾತು ಹರಿದಾಡುತ್ತಿದ್ದು, ಈ ಬಗ್ಗೆ ಅಧಿಕೃತ ಘೋಷಣೆ ಬಾಕಿಯಿದೆ.
ಈ ಬಾರಿ ಶೋನ ಥೀಮ್ “ಆರ್ಟಿಫಿಷಿಯಲ್ ಇಂಟೆಲಿಜೆನ್ಸ್” ಇರಲಿದ್ದು, ಈ ಸೀಸನ್ ಟೆಕ್ನಾಲಜಿಯ ಅಂಶಗಳನ್ನು ಒಳಗೊಂಡಿರಲಿದೆ. ಸ್ಪರ್ಧಿಗಳ ಪಾತ್ರ ಹೀಗಿರುವ ಸೀಸನ್‌ನಲ್ಲಿ ಬಹುಮುಖ್ಯವಾಗಿದ್ದು, ಎಲಿಮಿನೇಷನ್ ಪ್ರೇಕ್ಷಕರಲ್ಲ, ಸ್ಪರ್ಧಿಗಳೇ ನಿರ್ಧಾರ ಮಾಡುವ ವ್ಯವಸ್ಥೆ ಇರಲಿದೆ. ಟಾಸ್ಕ್, ನಾಮನಿರ್ದೇಶನ ಹಾಗೂ ಪಡಿತರ ಹಂಚಿಕೆಯಲ್ಲೂ ಸ್ಪರ್ಧಿಗಳು ತಾವು ತಾವು ನಿರ್ಧಾರ ಕೈಗೊಳ್ಳಬೇಕಿದೆ.
ಈ ಬಾರಿಯ ಸ್ಪರ್ಧಿಗಳ ಪಟ್ಟಿಯು ಇನ್ನೂ ಅಧಿಕೃತವಾಗದಿದ್ದರೂ, ರತಿ ಪಾಂಡೆ, ಹುನಾರ್ ಅಲಿ, ಅಪೂರ್ವ ಮುಖಿಜಾ, ಶ್ರೀ ಫೈಸು, ಧನಶ್ರೀ ವರ್ಮಾ, ಶ್ರೀ ರಾಮ್ ಚಂದ್ರ, ಮೀರಾ ದೇವಸ್ಥಳ ಹಾಗೂ ಭಾವಿಕಾ ಶರ್ಮಾ ಈ ಶೋನಲ್ಲಿ ಭಾಗವಹಿಸಬಹುದು ಎಂಬ ಊಹಾಪೋಹಗಳಿವೆ.
ಬಿಗ್ ಬಾಸ್ 19 ಇದರ ವೀಕ್ಷಣಾ ಅವಧಿಯು ಸುಮಾರು ಐದು ತಿಂಗಳುಗಳವರೆಗೆ ಇರಲಿದ್ದು, ಮೊದಲು ಜಿಯೋ ಸಿನೆಮಾದಲ್ಲಿ ಸ್ಟ್ರೀಮ್ ಆಗಲಿದೆ. ನಂತರ ಪ್ರತಿದಿನವೂ ಕಲರ್ಸ್ ಟಿವಿಯಲ್ಲಿ ಒಂದು ಘಂಟೆಗೂ ಹೆಚ್ಚು ಕಾಲ ಪ್ರಸಾರವಾಗಲಿದೆ.
ಈ ಎಲ್ಲ ಹೊಸತತನದೊಂದಿಗೆ ಬಿಗ್ ಬಾಸ್ 19 ಮತ್ತೊಮ್ಮೆ ಭಾರತೀಯ ಟಿವಿ ಪ್ರೇಕ್ಷಕರ ಮನಸ್ಸು ಗೆಲ್ಲಲು ಸಜ್ಜಾಗಿದೆ.