ಸಿಹಿ ಪ್ರಿಯರಿಗೆ ಮನೆಯಲ್ಲಿಯೇ ತಯಾರಿಸಬಹುದಾದ ಸರಳ ಹಾಗೂ ರುಚಿಕರವಾದ ರೆಸಿಪಿಯೊಂದನ್ನು ಪರಿಚಯಿಸುತ್ತಿದ್ದೇವೆ. ಅದೇ ಕೊಬ್ಬರಿಯಿಂದ ಮಾಡಬಹುದಾದ ‘ಕೊಬ್ಬರಿ ಲಡ್ಡು’. ಇದಕ್ಕೆ ಬೇಕಾಗುವ ಸಾಮಗ್ರಿಗಳು ಸಹ ಕೇವಲ ನಿಮ್ಮ ಅಡುಗೆ ಮನೆಯಲ್ಲಿ ಯಾವಾಗ್ಲೂ ಲಭ್ಯವಿರುತ್ತವೆ.
ಬೇಕಾಗುವ ಸಾಮಗ್ರಿಗಳು:
ತುರಿದಿರುವ ಕೊಬ್ಬರಿ – 1 ಕಾಲು ಕಪ್
ಹಾಲು – ಮುಕ್ಕಾಲು ಲೀಟರ್
ಸಕ್ಕರೆ – 1/3 ಕಪ್
ತುಪ್ಪ – 2 ಚಮಚ
ಏಲಕ್ಕಿ ಪುಡಿ – ಎರಡು ಚಿಟಿಕೆ
ಬಾದಾಮಿ- ಸ್ವಲ್ಪ
ಮಾಡುವ ವಿಧಾನ:
ಮೊದಲು, ಒಂದು ದಪ್ಪದ ತಳವಿರುವ ಬಾಣಲೆಯಲ್ಲಿ ತುರಿದ ಕೊಬ್ಬರಿ ಹಾಕಿ ಬ್ರೌನ್ ಬಣ್ಣ ಬರುವವರೆಗೆ ಹುರಿಯಬೇಕು. ಬಳಿಕ ಅದಕ್ಕೆ ಹಾಲು ಹಾಗೂ ಸಕ್ಕರೆಯನ್ನು ಸೇರಿಸಿ, ಕಡಿಮೆ ಉರಿಯಲ್ಲಿ ತಿರುಗಿಸುತ್ತಾ ಮಿಶ್ರಣವು ಗಟ್ಟಿ ಆಗುವವರೆಗೂ ಕಾಯಿಸಬೇಕು. ನಂತರ ತುಪ್ಪ ಹಾಗೂ ಏಲಕ್ಕಿ ಪುಡಿ ಸೇರಿಸಿ ಪುನಃ ಚೆನ್ನಾಗಿ ಮಿಕ್ಸ್ ಮಾಡಿ.
ಮಿಶ್ರಣ ಸರಿಯಾಗಿ ಗಟ್ಟಿ ಬಂದ ತಕ್ಷಣ ಸ್ಟೌವ್ ಆಫ್ ಮಾಡಿ, ಸ್ವಲ್ಪ ತಣ್ಣಗಾದ ಮೇಲೆ ಕೈಗೆ ತುಪ್ಪ ಸವರಿಸಿಕೊಂಡು ಉಂಡೆ ಆಕಾರದಲ್ಲಿ ಲಡ್ಡು ಮಾಡಿ ಪ್ರತಿಯೊಂದು ಲಡ್ಡುವಿನ ಮೇಲೆ ಬಾದಾಮಿ ತುಂಡನ್ನು ಅಲಂಕರಿಸಿದರೆ ಸಿಂಪಲ್ ಕೊಬ್ಬರಿ ಲಡ್ಡು ಸಿದ್ಧ.