ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಸು ಫ್ರಮ್ ಸೋ’ (Su From So) ಸಿನಿಮಾ ಜುಲೈ 25 ರಂದು ತೆರೆಕಂಡಿದ್ದು, ಬಿಡುಗಡೆಗೂ ಮುನ್ನವೇ ಪೇಡ್ ಪ್ರೀಮಿಯರ್ ಮೂಲಕ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಈ ಚಿತ್ರದ ಯಶಸ್ಸಿಗೆ ಮೊದಲ ದಿನವೇ ಸೂಚನೆ ಸಿಕ್ಕಿತ್ತು. ಆರಂಭದಲ್ಲಿ ಕೇವಲ 75 ಥಿಯೇಟರ್‌ಗಳಲ್ಲಿ ಮಾತ್ರ ರಿಲೀಸ್ ಆದರೂ, ಎರಡನೇ ದಿನದಿಂದಲೇ ಥಿಯೇಟರ್‌ಗಳ ಹಾಗೂ ಶೋಗಳ ಸಂಖ್ಯೆ ನಿರೀಕ್ಷೆಗೂ ಮೀರಿ ಏರಿಕೆಯಾಗಿದೆ.
ಚಿತ್ರತಂಡವೇ ಈ ವಿಷಯವನ್ನು ಖಚಿತಪಡಿಸಿದ್ದು, mouth publicity ಮೂಲಕ ಸಿನಿಮಾ ಜನರ ಗಮನ ಸೆಳೆಯುತ್ತಿದೆ. ಪ್ರಾರಂಭದಲ್ಲಿ ಸಿಂಗಲ್ ಥಿಯೇಟರ್‌ಗಳಲ್ಲಿ ಮಾತ್ರ ಇದ್ದ ಈ ಸಿನಿಮಾ ಹಾಸ್ಯ, ಭಯ ಮತ್ತು ಸಂದೇಶ ಎಲ್ಲವನ್ನೂ ಒಳಗೊಂಡಿರುವುದು ಸಿನಿ ಪ್ರೇಮಿಗಳಿಗೆ ಆಕರ್ಷಣೆಯ ಅಂಶವಾಗಿರುವುದು ಸ್ಪಷ್ಟವಾಗಿದ್ದು ಈಗ ಶೋ ಸಂಖ್ಯೆ ಏರಿಕೆ ಕಂಡಿದೆ.
ಚಿತ್ರದ ಕಥೆ ಹಾಸ್ಯಾಧಾರಿತವಾಗಿದ್ದು, ಪ್ರೇಕ್ಷಕರು ಮೊದಲಾರ್ಧದಲ್ಲಿ ನಗುತ್ತಲೇ ಇರುತ್ತಾರೆ. ದ್ವಿತೀಯಾರ್ಧದಲ್ಲಿ ಭಾವನಾತ್ಮಕ ಹಾಗೂ ಭಯಾನಕ ತಿರುವು ಕೂಡ ಇದೆ. ಹಾರರ್ ಕಾಮಿಡಿ ಎಂದು ವರ್ಣಿಸಲಾಗುವ ಈ ಸಿನಿಮಾ ನೋಡಿದವರು ಎರಡನೇ ಬಾರಿಗೆ ಮತ್ತೆ ಬರುವಂತಾ ಅನುಭವವನ್ನ ಪಡುತ್ತಿದ್ದಾರೆ.
ಚಿತ್ರದ ನಿರ್ದೇಶನ ಹಾಗೂ ಪ್ರಮುಖ ಪಾತ್ರದಲ್ಲಿ ಜೆಪಿ ತುಮ್ಮಿನಾಡ್ ಕಾಣಿಸಿಕೊಂಡಿದ್ದಾರೆ. ಸಂಗೀತವನ್ನು ಸುಮೇಧ್ ಕೆ ನೀಡಿದ್ದು, ಶನೀಲ್ ಗೌತಮ್ ಸೇರಿದಂತೆ ಕರಾವಳಿ ರಂಗಭೂಮಿಯ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸಿನಿಮಾದ ಕತೆ, ನಿರ್ವಹಣೆ ಹಾಗೂ ಪಾತ್ರಗಳು ಎಲ್ಲವೂ ಜನರ ಮೆಚ್ಚುಗೆ ಪಡೆಯುತ್ತಿವೆ.
ಮಲ್ಟಿಪ್ಲೆಕ್ಸ್ ಸೇರಿದಂತೆ ಹಲವು ಥಿಯೇಟರ್‌ಗಳಲ್ಲಿ ಶೋಗಳು ಹೆಚ್ಚಾಗುತ್ತಿರುವುದರಿಂದ, ಇದು ಚಿತ್ರಕ್ಕೆ ಮತ್ತಷ್ಟು ಜನಪ್ರಿಯತೆಯನ್ನು ತರುತ್ತಿದೆ. ಸಿನಿಮಾ ನೋಡಿದವರು, “ಫ್ಯಾಮಿಲಿ ಜೊತೆ ಮತ್ತೆ ಬರುತ್ತೇವೆ” ಎಂಬ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ. ಹೀಗಾಗಿ ‘ಸು ಫ್ರಮ್ ಸೋ’ ಚಿತ್ರವು ಬಾಕ್ಸಾಫೀಸ್‌ನಲ್ಲಿ ಸಧ್ಯ ಒಳ್ಳೆಯ ಓಟವನ್ನು ದಾಖಲಿಸುತ್ತಿದೆ.