CINE | ಭರ್ಜರಿ ಮೆಚ್ಚುಗೆ ಪಡೆದ “ಮಹಾವತಾರ ನರಸಿಂಹ”: ಜಪನ್, ಕೊರಿಯನ್ ಭಾಷೆಯಲ್ಲೂ ರಿಲೀಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೊಂಬಾಳೆ ಫಿಲ್ಮ್ಸ್‌ ಪ್ರಸ್ತುತಪಡಿಸಿ, ಕ್ಲೀನ್ ಪ್ರೊಡಕ್ಷನ್ಸ್ ನಿರ್ಮಿಸಿರುವ “ಮಹಾವತಾರ ನರಸಿಂಹ” ಎಂಬ ಆನಿಮೇಟೆಡ್ ಸಿನಿಮಾ ಜುಲೈ 25 ರಂದು ದೇಶದಾದ್ಯಂತ ತೆರೆಕಂಡಿದ್ದು, ಪ್ರೇಕ್ಷಕರಿಂದ ಭರ್ಜರಿ ಮೆಚ್ಚುಗೆ ಪಡೆಯುತ್ತಿದೆ. ಹಿಂದಿನ ಭಕ್ತಪ್ರಹ್ಲಾದ ಚಿತ್ರದಲ್ಲಿ ಬಾಲನಟನಾಗಿ ಅಭಿನಯಿಸಿದ್ದ ಪುನೀತ್ ರಾಜ್‌ಕುಮಾರ್ ಅವರ ನೆನಪನ್ನು ತರಿಸುವಂತೆ, ಈ ಚಿತ್ರ ಪ್ರೇಕ್ಷಕರಿಗೆ ಭಾವನಾತ್ಮಕ ಅನುಭವವನ್ನು ನೀಡಿದೆ.

ಈ ಸಿನಿಮಾ ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿ, ಭಾರತೀಯರು ಮಾತ್ರವಲ್ಲದೆ ಜಾಗತಿಕ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಇಂಗ್ಲಿಷ್ ಉಪಶೀರ್ಷಿಕೆಗಳೊಂದಿಗೆ ಜಪಾನೀಸ್, ಸ್ಪ್ಯಾನಿಷ್, ಕೊರಿಯನ್ ಮತ್ತು ರಷ್ಯನ್ ಭಾಷೆಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ. ನಿರ್ದೇಶಕ ಅಶ್ವಿನ್ ಕುಮಾರ್ ಹೇಳುವಂತೆ, ಈ ಚಿತ್ರ ಕೊರಿಯನ್ ಹಾಗೂ ಜಪಾನೀಸ್ ಅನಿಮೇಶನ್‌ಗಳಿಂದ ಪ್ರೇರಣೆ ಪಡೆದಿದ್ದು, ಭಾರತೀಯ ಪೌರಾಣಿಕತೆಯನ್ನು ಜಾಗತಿಕ ಮಟ್ಟಕ್ಕೆ ತಲುಪಿಸುವ ಮಹತ್ವಾಕಾಂಕ್ಷೆಯ ಭಾಗವಾಗಿದೆ.

ಈ ಚಿತ್ರ ‘ಮಹಾವತಾರ್ ಸಿನೆಮ್ಯಾಟಿಕ್ ಯೂನಿವರ್ಸ್’ ಎಂಬ ದೊಡ್ಡ ಯೋಜನೆಯ ಮೊದಲ ಭಾಗವಾಗಿದೆ. ಈ ಫ್ರಾಂಚೈಸ್‌ನ್ನು ಏಳು ಭಾಗಗಳಲ್ಲಿ ಬಿಡುಗಡೆಗೊಳಿಸಲು ನಿರ್ಧಾರವಾಗಿದ್ದು, 2037ರಲ್ಲಿ ಮಹಾವತಾರ್ ಕಲ್ಕಿ ಭಾಗ 2 ಮೂಲಕ ಇದರ ಅಂತ್ಯಗೊಳ್ಳಲಿದೆ. ಮುಂದಿನ ಭಾಗಗಳಲ್ಲಿ ಮಹಾವತಾರ್ ಪರಶುರಾಮ್, ರಘುನಂದನ್, ದ್ವಾರಕಾಧೀಶ್, ಗೋಕುಲಾನಂದ ಮತ್ತು ಕಲ್ಕಿ ಪಾತ್ರಗಳು ಪ್ರತ್ಯೇಕ ಚಿತ್ರಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿವೆ.

ಇನ್ನು, ಈ ಯೂನಿವರ್ಸ್‌ನ್ನು ಆನಿಮೇಟೆಡ್ ಸಿನಿಮಾ ಮೀರಿಸಿ, ವಿಡಿಯೋ ಗೇಮ್‌ಗಳು, ಕಾಮಿಕ್ಸ್ ಮತ್ತು ಡಿಜಿಟಲ್ ಮೀಡಿಯಾದಲ್ಲಿ ವಿಸ್ತರಿಸುವ ಯೋಜನೆಗಳೂ ಮುಂದಿಟ್ಟುಕೊಳ್ಳಲಾಗಿದೆ. ಹೀಗಾಗಿ, ಭಾರತೀಯ ಪೌರಾಣಿಕ ಕಥೆಗಳನ್ನು ಜಾಗತಿಕ ಮಟ್ಟಕ್ಕೆ ಪರಿಚಯಿಸುವ ಹೊಸ ಅಧ್ಯಾಯವನ್ನು “ಮಹಾವತಾರ ನರಸಿಂಹ” ಆರಂಭಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!