ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಜನೀಶ್ ಲೋಕನಾಥ್ ಮತ್ತು ಸಿ.ಆರ್. ಬಾಬಿ ಅವರ ABBS Studios ಲಾಂಛನದಲ್ಲಿ ನಿರ್ಮಿತವಾಗಿರುವ ‘ಜಸ್ಟ್ ಮ್ಯಾರೀಡ್’ ಸಿನಿಮಾ ಬಿಡುಗಡೆಯ ದಿನಾಂಕ ಪ್ರಕಟವಾಗಿದೆ. ಸಿ.ಆರ್. ಬಾಬಿ ನಿರ್ದೇಶನದ ಈ ಬಹು ನಿರೀಕ್ಷಿತ ಪ್ರೇಮಕಥೆ ಆಧಾರಿತ ಚಿತ್ರವು ಆಗಸ್ಟ್ 22ರಂದು ಪ್ರೇಕ್ಷಕರ ಮುಂದೆ ಬರಲಿದೆ.
ಈಗಾಗಲೇ ಟೀಸರ್, ಹಾಡುಗಳು ಮತ್ತು ಪೋಸ್ಟರ್‌ಗಳ ಮೂಲಕ ಗಮನ ಸೆಳೆದಿರುವ ಈ ಚಿತ್ರವು ಪ್ರೇಮ ಮತ್ತು ಕುಟುಂಬ ಕಥಾವಸ್ತು ಹೊಂದಿದ್ದು, ಶೈನ್ ಶೆಟ್ಟಿ ನಾಯಕನಾಗಿ ಮತ್ತು ಅಂಕಿತಾ ಅಮರ್ ನಾಯಕಿಯಾಗಿ ಅಭಿನಯಿಸಿದ್ದಾರೆ. ದೇವರಾಜ್, ಅಚ್ಯುತ್ ಕುಮಾರ್, ಮಾಳವಿಕಾ ಅವಿನಾಶ್, ಶ್ರುತಿ ಹರಿಹರನ್, ಶ್ರುತಿ ಕೃಷ್ಣ, ಶ್ರಿಮಾನ್, ರವಿಶಂಕರ್ ಗೌಡ ಸೇರಿದಂತೆ ಹಲವು ಖ್ಯಾತ ಕಲಾವಿದರು ಈ ಚಿತ್ರದಲ್ಲಿ ಪಾತ್ರವಹಿಸಿದ್ದಾರೆ.
ಚಿತ್ರಕ್ಕೆ ಆರ್.ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು, ಆರು ಸುಂದರ ಹಾಡುಗಳು ಸೇರಿದಂತೆ ಸಾಂಗೀತಿಕವಾಗಿ ಚಿತ್ರ ಈಗಾಗಲೇ ಜನಮನ ಸೆಳೆದಿದೆ. ಪಿಜಿ ಛಾಯಾಗ್ರಹಣ, ಶಾಂತಿ ಅರವಿಂದ್ ಹಾಗೂ ಬಾಬಾ ಭಾಸ್ಕರ್ ನೃತ್ಯ ನಿರ್ದೇಶನ, ವಿಕ್ರಮ್ ಸಾಹಸ ದೃಶ್ಯ ಸಂಯೋಜನೆ, ರಘು ನಿಡುವಳ್ಳಿ ಸಂಭಾಷಣೆಕಾರರಾಗಿದ್ದಾರೆ. ಸಿ.ಆರ್. ಬಾಬಿಯವರೇ ಕಥೆ ಹಾಗೂ ಚಿತ್ರಕಥೆ ಬರೆದಿದ್ದಾರೆ.
‘ಜಸ್ಟ್ ಮ್ಯಾರೀಡ್’ ಸಿನಿಮಾಗೆ ಸಂಗೀತ, ಭಾವನೆ, ಕಾಮಿಡಿ, ಸಂಬಂಧಗಳ ನಡುವೆ ನಡೆಯುವ ಪ್ರೇಮಕಥೆ ಎಲ್ಲವನ್ನೂ ಒಟ್ಟುಗೂಡಿಸುವ ಪ್ರಯತ್ನವಾಗಿದೆ. ಈಗಾಗಲೇ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿರುವುದರಿಂದ, ತೆರೆ ಮೇಲೆ ಅದೇ ಮಟ್ಟದ ಯಶಸ್ಸು ಪಡೆಯುವ ನಿರೀಕ್ಷೆಯಿದೆ.