ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ವಿವಿಧೆಡೆ ರಸಗೊಬ್ಬರ ಕೊರತೆಯ ವಿರುದ್ಧ ಸೋಮವಾರ ರಾಜ್ಯಾದ್ಯಂತ ಭಾರತೀಯ ಜನತಾ ಪಕ್ಷ (ಬಿಜೆಪಿ) ಹೋರಾಟ ಹಮ್ಮಿಕೊಂಡಿದ್ದು ಈ ಕುರಿತು ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ರಾಜ್ಯ ಸರ್ಕಾರ ರೈತರ ಸಮಸ್ಯೆ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದು, ಅದನ್ನು ಖಂಡಿಸಿ ಹೋರಾಟ ನಡೆಸುತ್ತಿದ್ದೇವೆ ಎಂದು ಹೇಳಿದರು.
ಬೆಂಗಳೂರು ಹೊರತುಪಡಿಸಿ ಉಳಿದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ದಾಸ್ತಾನಿಗಾಗಿ ಸಾಕಷ್ಟು ಅನುದಾನ ನೀಡಲಾಗುತ್ತಿತ್ತು. ಆದರೆ, ಈಗಾಗಲೇ ದಾಸ್ತಾನ ಅನುದಾನವನ್ನು 1,000 ಕೋಟಿಯಿಂದ 400 ಕೋಟಿಗೆ ಇಳಿಸಲಾಗಿದೆ ಎಂದು ವಿಜಯೇಂದ್ರ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಮುಂಗಾರು ಪ್ರಾರಂಭವಾದರೂ ರಾಜ್ಯ ಸರ್ಕಾರ ರಸಗೊಬ್ಬರ ಪೂರೈಕೆಗಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿಲ್ಲ. ಕೇಂದ್ರಕ್ಕೆ ಮೊದಲೇ ಪತ್ರ ಬರೆಯಬೇಕಿತ್ತು. ಈಗ ಬರೆಯದೇ ರೈತರನ್ನು ಬೀದಿಗೆ ತಂದು ನಿಲ್ಲಿಸಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಕ್ಕೆ ಈಗಾಗಲೇ 8 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಬಂದಿದೆ. ಆದರೆ ರಾಜ್ಯದಲ್ಲಿ ಕಳ್ಳಸಾಗಣೆ ನಡೆಯುತ್ತಿದೆ. ನಕಲಿ ಬೀಜ, ರಸಗೊಬ್ಬರ ಕೊರತೆ, ಕಳ್ಳ ದಂಧೆಗೆ ಸರ್ಕಾರ ಹೊಣೆ. ಬ್ರೋಕರ್‌ಗಳ ನೆರವಿನಿಂದ ರಸಗೊಬ್ಬರ ದಂಧೆ ನಡೆಯುತ್ತಿದೆ ಎಂದು ವಿಜಯೇಂದ್ರ ಆರೋಪಿಸಿದರು.