ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ವಯನಾಡಿನ ಜನತೆಗೆ ಜುಲೈ 30 ಅಂದರೆ ಅದು ಕಹಿ ತುಂಬಿರುವ ದಿನ. ಆ ದಿನ ಪ್ರಕೃತಿಯು ಮುನಿಸಿಕೊಂಡು ತೋರಿದ ರೌದ್ರತೆಗೆ 400ಕ್ಕೂ ಅಧಿಕ ಜನರು ಸಮಾಧಿಯಾಗಿದ್ದರು. ನೂರಾರು ಜನರು ಇನ್ನೂ ನಿರಾಶ್ರಿತರಾಗಿದ್ದಾರೆ.
ಚೂರಲ್ಮಾಲಾ, ಮುಂಡಕ್ಕೈ ಗ್ರಾಮಗಳು ಹೇಳಹೆಸರಿಲ್ಲದಂತೆ ಗುಡ್ಡಕುಸಿತದ ಅವಶೇಷಗಳಡಿ ಭೂಗತವಾಗಿತ್ತು. ಈ ದುರಂತ ಸಂಭವಿಸಿ ಜುಲೈ 30ಕ್ಕೆ ಒಂದು ವರ್ಷ ಕಳೆಯಲಿದೆ. ಇಲ್ಲಿನ ಅದೆಷ್ಟೋ ಕುಟುಂಬಗಳು ನಿರಾಶ್ರಿತರಾಗಿ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದಾರೆ.
ಈ ನಡುವೆ ಭೂಕುಸಿತದಲ್ಲಿ ಪತ್ನಿ, ಮಕ್ಕಳು ಸೇರಿದಂತೆ ಕುಟುಂಬದ 11 ಮಂದಿಯನ್ನು ಕಳೆದುಕೊಂಡ ವ್ಯಕ್ತಿಯೊಬ್ಬ ಆ ಕರಾಳ ದಿನವನ್ನು ವಿಶೇಷವಾಗಿ ಬಳಸಿಕೊಂಡಿದ್ದು, ತಾನು ಆರಂಭಿಸಿರುವ ರೆಸ್ಟೋರೆಂಟ್ ಅಂಡ್ ಬೇಕರಿಗೆ ‘ಜುಲೈ 30’ ಎಂದು ಹೆಸರಿಟ್ಟಿದ್ದಾನೆ.
ಕಲಥಿಂಗಲ್ ನೌಫಲ್ ಎಂಬಾತ ಭೂಕುಸಿತ ಸಂಕಷ್ಟದಿಂದ ಹೊರಬಂದು ಬದುಕನ್ನು ಪುನರ್ ನಿರ್ಮಿಸಿಕೊಳ್ಳಲು ಹೋಟೆಲ್ ಉದ್ಯಮ ಆರಂಭಿಸಿದ್ದಾರೆ. ಅದಕ್ಕೆ ಭೂಕುಸಿತ ದುರಂತ ಸಂಭವಿಸಿದ ತಾರೀಖನ್ನೇ ನಾಮಕರಣ ಮಾಡಿದ್ದಾರೆ.
ಭೂಕುಸಿತ ಸಂಭವಿಸಿದ ವೇಳೆ ತಾನು ಒಮಾನ್ನಲ್ಲಿ ಚೆಫ್ ಆಗಿ ಕೆಲಸ ಮಾಡುತ್ತಿದ್ದೆ. ದುರಂತದಲ್ಲಿ ತನ್ನಿಬ್ಬರು ಮಕ್ಕಳು, ಪತ್ನಿ ಸೇರಿದಂತೆ 11 ಮಂದಿಯನ್ನು ಕಳೆದುಕೊಂಡೆ. ಇದರಲ್ಲಿ ಐವರು ಶವಗಳು ಮಾತ್ರ ಸಿಕ್ಕಿದ್ದವು. ಉಳಿದವರನ್ನು ಡಿಎನ್ಎ ಪರೀಕ್ಷೆ ಮೂಲಕ ಗುರುತಿಸಲಾಗಿದೆ. ತಾಯ್ನಾಡಿಗೆ ಮರಳಿದ ಬಳಿಕ ನಾನು ಇಲ್ಲಿ ಕಂಡಿದ್ದು ಬರಿಯ ಅವಶೇಷಗಳು. ತನ್ನದೊಂದು ಮನೆ, ಕುಟುಂಬ ಇತ್ತು ಎಂಬ ಕುರುಹು ಭೂಗತವಾಗಿತ್ತು. ರೆಸ್ಟೋರೆಂಟ್ ಆರಂಭಿಸಬೇಕು ಎಂಬುದು ದಿವಂಗತ ಪತ್ನಿಯ ಕನಸಾಗಿತ್ತು. ಆಕೆಯ ಆಸೆಯಂತೆ ಈಗ ಹೋಟೆಲ್ ಮತ್ತು ಬೇಕರಿ ಉದ್ಯಮ ಆರಂಭಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ತನ್ನ ಬದುಕನ್ನೇ ಅಳಿಸಿಹಾಕಿದ ಕರಾಳ ದಿನದ ನೆನಪಿಗಾಗಿ ಹೋಟೆಲ್ಗೆ ‘ಜುಲೈ 30’ ಎಂದು ಹೆಸರಿಸಿದೆ. ಮೊದಮೊದಲು ಜನರು ಇದನ್ನು ಟೀಕಿಸಿದರು. ಆದರೆ, ನಾನು ದೃತಿಗೆಡದೆ ದುರಂತದ ತಾರೀಖನ್ನೇ ಆಯ್ಕೆ ಮಾಡಿಕೊಂಡೆ. ಇದನ್ನು ನೋಡಿದಾಕ್ಷಣ ಆ ದಿನದ ದುರಂತ ಕಣ್ಣ ಮುಂದೆ ಬರಬೇಕು ಮತ್ತು ಮನಸ್ಸು ವಿನಮ್ರವಾಗಬೇಕು ಎಂದು ಅವರು ಹೇಳಿದ್ದಾರೆ.