ಹೊಸ ದಿಗಂತ ವರದಿ, ಕಲಬುರಗಿ :
ನೆರೆಯ ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಗೆ 42 ಸಾವಿರ ಕ್ಯುಸೆಕ್ ನೀರು ಹರಿಬಿಡಲಾಗಿದ್ದು, ಜಿಲ್ಲೆಯ ಅಫಜಲಪೂರ ತಾಲೂಕಿನ ಸೊನ್ನ ಬ್ಯಾರೇಜಿಗೆ ರವಿವಾರ ಸಂಜೆಯೆ ತಲುಪಲಿದೆ.ಇನ್ನು ಉಜ್ಜನಿ ಮತ್ತು ವೀರ್ ಜಲಾಶಯದಿಂದ ಹೆಚ್ಚಿನ ನೀರು ಬಂದಲ್ಲಿ ಸೊನ್ನ ಬ್ಯಾರೇಜ್ ಮೂಲಕ ಭೀಮಾ ನದಿಗೆ ಹಾಗೂ ಬೆಣ್ಣೆತೋರಾ ಜಲಾಶಯದ ಮೂಲಕ ಕೆಳ ಪಾತ್ರದ ನದಿಗೆ ನೀರು ಬಿಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪೌಜಿಯಾ ತರನ್ನುಮ ತಿಳಿಸಿದರು.
ಹೀಗಾಗಿ ಸಾರ್ವಜನಿಕರು ನದಿ ದಂಡೆ ಕಡೆ ಹೋಗದಂತೆ ಮತ್ತ ಮುನ್ನೆಚ್ಚರಿಕೆ ವಹಿಸಬೇಕೆಂದು ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿದ್ದಾರೆ.
ಸೊನ್ನ ಬ್ಯಾರೇಜ್ನಿಂದ ಈಗಾಗಲೆ 4,000 ಕ್ಯುಸೆಕ್ ನೀರು ಭೀಮಾ ನದಿಗೆ ಹರಿಬಿಡಲಾಗುತ್ತಿದೆ. ಮಳೆಯ ಮುನ್ಸೂಚನೆ ಇರುವ ಕಾರಣ ಜಲಾಶಯದ ಒಳಹರಿವು ಹೆಚ್ಚಾದಂತೆ ಹೊರ ಹರಿವು ಹೆಚ್ಚಲಿದೆ. ಸೊನ್ನ ಮತ್ತು ಬೆಣ್ಣೆತೋರಾ ಬ್ಯಾರೇಜ್ ಕೆಳಗಡೆ ಇರುವ ನದಿ ಪಾತ್ರದ ಜನರು ಎಚ್ಚರಿಕೆಯಿಂದಿರಲು ಕೋರಲಾಗಿದೆ.
ನದಿ, ಹಳ್ಳ, ಕೆರೆ ದಡದಲ್ಲಿ ಬಟ್ಟೆ ತೊಳೆಯುವುದು, ಈಜಾಡುವುದು, ದನ-ಕರುಗಳನ್ನು ಮೆಯಿಸುವುದು ಹಾಗೂ ಅಪಾಯವಿರುವ ಸೇತುವೆಗಳಲ್ಲಿ ಸಂಚರಿಸಬಾರದು. ನದಿ ತೀರದ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಅಪಾಯವಿರುವ ನದಿ-ಹಳ್ಳಗಳಲ್ಲಿ ಈಜಾಡುವುದು ಮತ್ತು ಪೋಟೊ-ಸೆಲ್ಫಿಗಳನ್ನು ತೆಗೆದು ಅಪಾಯಕ್ಕೆ ಸಿಲುಕಬಾರದು. ಪ್ರವಾಹ ಸಂದರ್ಭದಲ್ಲಿ ಮೀನುಗಾರರಿಗೆ ಮೀನು ಹಿಡಿಯಲು ನದಿಯ ಕಡೆ ಹೋಗಬಾರದು ಎಂದು ಸಾರ್ವಜನಿಕರಿಗೆ ತಿಳಿಸಲಾಗಿದೆ.