ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಅವಸಾನೇಶ್ವರ ಮಹಾದೇವ ದೇವಸ್ಥಾನದ ಶೆಡ್ ಮೇಲೆ ವಿದ್ಯುತ್ ತಂತಿ ಬಿದ್ದು, ಇಬ್ಬರು ಮೃತಪಟ್ಟಿದ್ದು, 27ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಸ್ಥಳದಲ್ಲಿ ಕಾಲ್ತುಳಿತ ಉಂಟಾಗಿದೆ. ಶ್ರಾವಣದ ಮೂರನೇ ಸೋಮವಾರವಾದ ಇಂದು ಮುಂಜಾನೆಯಿಂದಲೇ ಭಕ್ತರು ದೇವಸ್ಥಾನಕ್ಕೆ ಆಗಮಿಸಿದ್ದರು.
ತಗಡಿನ ಶೆಡ್ ಮೇಲೆ ವಿದ್ಯುತ್ ತಂತಿ ಬಿದ್ದು, ವಿದ್ಯುತ್ ಸ್ಪರ್ಶಿಸಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಸುಮಾರು 27ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದ್ದು, ಅವರಲ್ಲಿ 10 ಜನರನ್ನು ತ್ರಿವೇದಿಗಂಜ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ ಎಂದು ಹೇಳಲಾಗಿದೆ. ಇತರ ಐದು ಜನರ ಸ್ಥಿತಿ ಗಂಭೀರವಾದ ಕಾರಣ ಅವರನ್ನು ಉನ್ನತ ವೈದ್ಯಕೀಯ ಸೌಲಭ್ಯಕ್ಕೆ ಉಲ್ಲೇಖಿಸಲಾಗಿದೆ.
ಶತಮಾನಗಳಷ್ಟು ಹಳೆಯದಾದ ಹೈದರ್‍ಗಢ್ ಪ್ರದೇಶದಲ್ಲಿ ಪ್ರಾರ್ಥನೆ ಸಲ್ಲಿಸಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದಾಗ ಈ ಆಘಾತಕಾರಿ ಘಟನೆ ಸಂಭವಿಸಿದೆ. ವರದಿಗಳ ಪ್ರಕಾರ, ಕೋತಿಗಳ ದಂಡು ಆಕಸ್ಮಿಕವಾಗಿ ಓವರ್ಹೆಡ್ ವಿದ್ಯುತ್ ತಂತಿಯನ್ನು ಉರುಳಿಸಿ, ಭಕ್ತರು ದರ್ಶನಕ್ಕಾಗಿ ಸೇರುತ್ತಿದ್ದ ತಗಡಿನ ಶೆಡ್ ಮೇಲೆ ಬಿದ್ದಿದೆ ಎನ್ನಲಾಗಿದೆ.