ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ಶುಭ್‌ಮನ್ ಗಿಲ್ ಆರ್ಭಟ: ದಿಗ್ಗಜರ ರೆಕಾರ್ಡ್ ಪುಡಿಗಟ್ಟಿದ ಇಂಡಿಯನ್ ಕ್ಯಾಪ್ಟನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ನಾಯಕ ಶುಭ್‌ಮನ್ ಗಿಲ್ ತನ್ನ ಆಟದಿಂದ ಮತ್ತೊಮ್ಮೆ ಮೆರೆದಿದ್ದಾರೆ. ಎರಡನೇ ಇನ್ನಿಂಗ್ಸ್‌ನಲ್ಲಿ 103 ರನ್ ಬಾರಿಸಿದ ಗಿಲ್, ಇಡೀ ಸರಣಿಯಲ್ಲಿ ಈಗಾಗಲೇ 722 ರನ್ ಗಳಿಸಿದ್ದಾರೆ. ಇದರೊಂದಿಗೆ ಅವರು ಭಾರತ ಪರ ವಿದೇಶಿ ಟೆಸ್ಟ್ ಸರಣಿಯೊಂದರಲ್ಲಿ 700ಕ್ಕೂ ಹೆಚ್ಚು ರನ್ ಸಿಡಿಸಿದ ಎರಡನೇ ಬ್ಯಾಟ್ಸ್ಮನ್ ಎಂಬ ದಾಖಲೆ ಗಿಟ್ಟಿಸಿಕೊಂಡಿದ್ದಾರೆ.

1971ರಲ್ಲಿ ವೆಸ್ಟ್‌ಇಂಡೀಸ್ ವಿರುದ್ಧದ ಸರಣಿಯಲ್ಲಿ ಸುನಿಲ್ ಗವಾಸ್ಕರ್ 774 ರನ್ ಗಳಿಸಿದ್ದರು. ಗವಾಸ್ಕರ್ ಬಳಿಕ ಗಿಲ್ ಈಗ ಈ ಸಾಧನೆಯತ್ತ ಕಾಲಿಟ್ಟಿದ್ದು, ಭಾರತದ ಪರ ಒಟ್ಟು 700 ಪ್ಲಸ್ ರನ್ ಗಳಿಸಿದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ.

ಇನ್ನು, ಸರಣಿಯೊಂದರಲ್ಲಿ 4 ಶತಕ ಬಾರಿಸಿದ ತೃತೀಯ ನಾಯಕ ಎಂದು ಗಿಲ್ ಹೊಸ ದಾಖಲೆ ಬರೆದಿದ್ದಾರೆ. ಈ ಹಿಂದೆ ಡಾನ್ ಬ್ರಾಡ್ಮನ್ (1947/48) ಮತ್ತು ಗವಾಸ್ಕರ್ (1978/79) ಈ ಸಾಧನೆ ಮಾಡಿದ್ದರು. ಹಾಗೆಯೇ, ನಾಯಕತ್ವದ ಮೊದಲ ಟೆಸ್ಟ್ ಸರಣಿಯಲ್ಲೇ 4 ಶತಕ ಬಾರಿಸಿದ ವಿಶ್ವದ ಮೊದಲ ಆಟಗಾರ ಎಂಬ ಖ್ಯಾತಿಗೂ ಗಿಲ್ ಪಾತ್ರರಾಗಿದ್ದಾರೆ.

ಶುಭ್‌ಮನ್ ಗಿಲ್ ಈ ಸಾಧನೆಯೊಂದಿಗೆ ನಾಯಕನಾಗಿ ಚೊಚ್ಚಲ ಸರಣಿಯಲ್ಲಿ ಗರಿಷ್ಠ ರನ್ ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದಿದ್ದಾರೆ. ಮೊದಲ ಸ್ಥಾನದಲ್ಲಿ ಆಸ್ಟ್ರೇಲಿಯಾದ ದಿಗ್ಗಜ ಡಾನ್ ಬ್ರಾಡ್ಮನ್ ಇಂಗ್ಲೆಂಡ್ ವಿರುದ್ಧ 810 ರನ್ ಗಳಿಸಿದ್ದರೆ, ಗಿಲ್ ಈ ಸರಣಿಯಲ್ಲಿ ಈಗಾಗಲೇ 722 ರನ್ ಕಲೆ ಹಾಕಿದ್ದಾರೆ.

ಈ ಪ್ರದರ್ಶನದಿಂದಾಗಿ ಗಿಲ್ ಕೇವಲ ಹೊಸ ದಾಖಲೆಗಳನ್ನು ಮಾತ್ರವಲ್ಲ, ಭವಿಷ್ಯದ ನಾಯಕತ್ವದ ಭರವಸೆಯನ್ನೂ ಹುಟ್ಟುಹಾಕಿದ್ದಾರೆ. 2025ರ ಇಂಗ್ಲೆಂಡ್ ವಿರುದ್ಧದ ಸರಣಿಯು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಮೆಲುಕು ಹಾಕುವಂತಹ ಕ್ಷಣಗಳೊಂದಾಗಿ ಬದಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!