ಭಾರತೀಯ ಸಂಸ್ಕೃತಿಯಲ್ಲಿ ಮನೆಯ ಬಾಗಿಲಿಗೆ ತಾಜಾ ಎಲೆಗಳಿಂದ ತೋರಣವನ್ನು ಕಟ್ಟುವ ಸಂಪ್ರದಾಯಕ್ಕೆ ಶತಮಾನಗಳ ಇತಿಹಾಸವಿದೆ. ಇದು ಕೇವಲ ಅಲಂಕಾರಿಕ ಆಚರಣೆ ಮಾತ್ರವಲ್ಲದೆ, ಧಾರ್ಮಿಕ ನಂಬಿಕೆ, ಜ್ಯೋತಿಷ್ಯ ಶಾಸ್ತ್ರ ಹಾಗೂ ಸಾಂಸ್ಕೃತಿಕ ಮಹತ್ವವನ್ನು ಹೊಂದಿರುವುದು ತಜ್ಞರು ಸ್ಪಷ್ಟಪಡಿಸಿದ್ದಾರೆ.
ಸಕಾರಾತ್ಮಕ ಶಕ್ತಿಯ ಆಹ್ವಾನ
ಮನೆಯ ಮುಖ್ಯ ದ್ವಾರವು ಶಕ್ತಿಯ ನೋಟದಲ್ಲಿ ಅತೀ ಮಹತ್ವದ ಭಾಗವಾಗಿದ್ದು, ತೋರಣವು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸಿ, ನಕಾರಾತ್ಮಕ ಶಕ್ತಿಗಳನ್ನು ತಡೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಮಾವಿನ ಅಥವಾ ಅಶೋಕ ಎಲೆಗಳಿಂದ ತಯಾರಿಸಿದ ತೋರಣವು ಮನೆಯಲ್ಲಿ ಧನಾತ್ಮಕ ವಾತಾವರಣವನ್ನು ಹೆಚ್ಚಿಸುವ ಮೂಲಕ ಶಾಂತಿ, ಸಂತೋಷ ಹಾಗೂ ಸಮೃದ್ಧಿಗೆ ದಾರಿ ಮಾಡಿಕೊಡುತ್ತದೆ.
ಲಕ್ಷ್ಮೀ ದೇವಿಯ ಸ್ವಾಗತ
ಶ್ರದ್ಧಾ ಮತ್ತು ಭಕ್ತಿಯಿಂದ ತೋರಣ ಕಟ್ಟುವುದು ಲಕ್ಷ್ಮೀ ದೇವಿಯನ್ನು ಮನೆಯಲ್ಲಿ ಸ್ವಾಗತಿಸುವ ಸಂಕೇತವಾಗಿ ಪರಿಗಣಿಸಲಾಗುತ್ತದೆ. ಶ್ರಾವಣ, ದೀಪಾವಳಿ, ಯುಗಾದಿ, ನವರಾತ್ರಿಗಳಂತಹ ಹಬ್ಬಗಳಲ್ಲಿ ವಿಶೇಷವಾಗಿ ತೋರಣ ಕಟ್ಟುವುದು ಸಮೃದ್ಧಿಯ ಚಿಹ್ನೆ ಎಂದು ವೈದಿಕ ಶಾಸ್ತ್ರದಲ್ಲಿ ವಿವರಿಸಲಾಗಿದೆ.
ತಾಜಾ ವಸ್ತುಗಳ ಪ್ರಾಮುಖ್ಯತೆ
ತೋರಣದ ತಯಾರಿಯಲ್ಲಿ ಬಳಸುವ ಎಲೆಗಳು ಮತ್ತು ಹೂಗಳು ತಾಜಾ ಹಾಗೂ ಪವಿತ್ರವಾಗಿರಬೇಕು. ಮಾವಿನ ಎಲೆಗಳು ಪೌಷ್ಟಿಕ ಹಾಗೂ ಶುದ್ಧಿಕರಣ ಗುಣದಿಂದ ಕೂಡಿದ್ದು, ಅಶೋಕ ಎಲೆಗಳು ದುಃಖ ನಿವಾರಣೆಗೆ ಕಾರಣವಾಗುತ್ತವೆ ಎಂದು ನಂಬಲಾಗಿದೆ.
ಶುಭ ಸಮಯ ಹಾಗೂ ನಿಯಮಿತ ಬದಲಾವಣೆ
ತೋರಣವನ್ನು ಶುಭ ದಿನಗಳಲ್ಲಿ, ಹಬ್ಬದ ದಿನ, ಶುಕ್ರವಾರ ಅಥವಾ ಗುರುವಾರಗಳಂದು ಕಟ್ಟುವ ಸಂಪ್ರದಾಯವಿದೆ. ಬಾಡಿದ ಎಲೆ ಅಥವಾ ಹೂಗಳಿಂದ ತೋರಣ ಇಡಬಾರದು. ನಿಯಮಿತವಾಗಿ ಅದನ್ನು ಬದಲಾಯಿಸುವ ಮೂಲಕ ಸಕಾರಾತ್ಮಕ ಶಕ್ತಿಯ ಹರಿವನ್ನು ನಿರಂತರವಾಗಿ ಕಾಪಾಡಬಹುದು ಎಂದು ಜ್ಯೋತಿಷ್ಯರು ಸಲಹೆ ನೀಡುತ್ತಾರೆ.