ಹೊಸದಿಗಂತ ಮಡಿಕೇರಿ:
ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಕಾಡಾನೆ ದಾಳಿ ನಡೆಸಿದ ಪರಿಣಾಮ ಕಾರ್ಮಿಕರಿಬ್ಬರು ಗಾಯಗೊಂಡಿರುವ ಘಟನೆ ಸೋಮವಾರ ನಡೆದಿದೆ.
ವೀರಾಜಪೇಟೆ ತಾಲೂಕಿನ ಕರಡಿಗೋಡುವಿನಲ್ಲಿ ಈ ಘಟನೆ ನಡೆದಿದ್ದು, ಕಾಡಾನೆ ದಾಳಿಯಿಂದ ಗಾಯಗೊಂಡಿರುವ ಇಬ್ಬರು ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆನ್ನಲಾಗಿದೆ.
ಕಾಡಾನೆಗಳು ಕರಡಿಗೋಡು ಗ್ರಾಮ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ್ದು, ಅರಣ್ಯ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಇದೀಗ ಕಾರ್ಮಿಕರು ತಿರುಗಿ ಬಿದ್ದಿದ್ದಾರೆ.ಅಲ್ಲದೆ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಲು ಸಜ್ಜಾಗಿವೆ.
ದಿಕ್ಕಾಪಾಲಾಗಿ ಓಡಿ ಬಚಾವಾದ ಕಾರ್ಮಿಕರು: ಮತ್ತೊಂದೆಡೆ ಪಾಲಿಬೆಟ್ಟದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರನ್ನು ಕಾಡಾನೆಯೊಂದು ಅಟ್ಟಾಡಿಸಿಕೊಂಡು ಬಂದ ಘಟನೆ ನಡೆದಿದೆ.
ಪಾಲಿಬೆಟ್ಟ ಸಮೀಪದ ವಡ್ಡರಹಳ್ಳಿ ಬಿ. ಬಿ.ಟಿ ಸಿ ಕಂಪನಿಯ ಕಾಫಿ ತೋಟದಲ್ಲಿ ಸೋಮವಾರ ಬೆಳಗ್ಗೆ ಕೆಲಸಕ್ಕೆಂದು ಕಾರ್ಮಿಕರು ತೆರಳುವ ವೇಳೆ ಕಾಡಾನೆಯೊಂದು ರಸ್ತೆಯಲ್ಲೇ ಕಾಣಿಸಿಕೊಂಡಿದ್ದು, ಕಾರ್ಮಿಕರನ್ನು ಅಟ್ಟಿಸಿಕೊಂಡು ಬಂದಿದೆ. ಈ ಸಂದರ್ಭ ಕಾರ್ಮಿಕರು ಓಡಿ ಪಾರಾಗಿರುವ ಘಟನೆ ಸಿಸಿಟಿವಿಯಲ್ಲಿ ಸರಿಯಾಗಿದೆ.