ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದಲ್ಲಿನ ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ಆಧಾರ್ ಮತ್ತು ವೋಟರ್ ಐಡಿ ಕಾರ್ಡ್ ಅನ್ನು ಅನ್ನು ಯಾಕೆ ಪರಿಗಣಿಸುತ್ತಿಲ್ಲ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.
ಇಂದು ನ್ಯಾಯಮೂರ್ತಿ ಸೂರ್ಯಕಾಂತ್ ಅವರ ನೇತೃತ್ವದ ಪೀಠವು, ಚುನಾವಣಾ ಆಯೋಗದ ಈ ನಿಲುವನ್ನು ಪ್ರಶ್ನಿಸಿದೆ. ಆಧಾರ್ ಕಾರ್ಡ್ ಅನ್ನು ಈಗಾಗಲೇ ನೋಂದಣಿ ಫಾರ್ಮ್‌ನಲ್ಲಿ ಕೇಳಲಾಗುತ್ತಿದ್ದರೂ, ಅದನ್ನು ಮತ್ತು ವೋಟರ್ ಕಾರ್ಡ್ ಅನ್ನು ಯಾಕೆ ಪರಿಗಣಿಸುತ್ತಿಲ್ಲ ಎಂದು ಪ್ರಶ್ನಿಸಿದೆ.
ಸುಪ್ರೀಂ ಕೋರ್ಟ್ ಜುಲೈ 10 ರಂದು, ಬಿಹಾರದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ ಆಧಾರ್, ವೋಟರ್ ಐಡಿ ಮತ್ತು ರೇಷನ್ ಕಾರ್ಡ್‌ಗಳನ್ನು ಮತದಾರರ ನೋಂದಣಿಗೆ ಮಾನ್ಯ ದಾಖಲೆಗಳೆಂದು ಪರಿಗಣಿಸುವಂತೆ ಚುನಾವಣಾ ಆಯೋಗಕ್ಕೆ ತಿಳಿಸಿತ್ತು. ಇದು ನ್ಯಾಯದ ಹಿತಾಸಕ್ತಿಗೆ ಅಗತ್ಯ ಎಂದು ಹೇಳಿತ್ತು. ಪರಿಷ್ಕರಣಾ ಕಾರ್ಯವನ್ನು ಮುಂದುವರಿಸಲು ಸಹ ಅನುಮತಿ ನೀಡಿತ್ತು.
ಆಧಾರ್ ಪೌರತ್ವದ ಪುರಾವೆಯಲ್ಲ ಎಂದು ಚುನಾವಣಾ ಆಯೋಗ ವಾದಿಸಿತು. ಅಲ್ಲದೆ, ನಕಲಿ ರೇಷನ್ ಕಾರ್ಡ್‌ಗಳ ಬಗ್ಗೆಯೂ ಆತಂಕ ವ್ಯಕ್ತಪಡಿಸಿತು. ದೊಡ್ಡ ಪ್ರಮಾಣದ ನಕಲಿ ದಾಖಲೆ ಸೃಷ್ಟಿಯಿಂದಾಗಿ ಅವುಗಳನ್ನು ನಂಬುವುದು ಕಷ್ಟ ಎಂದು ಹೇಳಿತು. ಆದರೆ, ಆಧಾರ್ ಅನ್ನು ಗುರುತಿನ ಪುರಾವೆಯಾಗಿ ಸಲ್ಲಿಸಬಹುದೆಂದು ಆಯೋಗ ಒಪ್ಪಿಕೊಂಡಿದೆ. ಅದರ ಸಂಖ್ಯೆಯನ್ನು ಈಗಾಗಲೇ ನೋಂದಣಿ ಫಾರ್ಮ್‌ನಲ್ಲಿ ಕೇಳಲಾಗುತ್ತಿದೆ ಎಂದು ತಿಳಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್, ಚುನಾವಣಾ ಆಯೋಗದ ವಾದದಲ್ಲಿನ ವ್ಯತ್ಯಾಸವನ್ನು ಪ್ರಶ್ನಿಸಿತು. ಚುನಾವಣಾ ಆಯೋಗದ ಪಟ್ಟಿಯಲ್ಲಿರುವ ಯಾವುದೇ ದಾಖಲೆಯು ಖಚಿತವಲ್ಲದಿದ್ದರೆ, ಅದೇ ವಾದವನ್ನು ಆಧಾರ್ ಮತ್ತು ವೋಟರ್ ಐಡಿಗೂ ಅನ್ವಯಿಸಬಹುದು ಎಂದು ಹೇಳಿತು.
ಒಂದು ವೇಳೆ ನೀವು ಸ್ವೀಕರಿಸಿರುವ ಇತರ ಹತ್ತು ದಾಖಲೆಗಳು ನಕಲಿ ಎಂದು ಕಂಡುಬಂದರೆ, ಅದನ್ನು ತಡೆಯಲು ನಿಮ್ಮಲ್ಲಿ ಏನು ವ್ಯವಸ್ಥೆ ಇದೆ? ಸಾಮೂಹಿಕವಾಗಿ ಸೇರಿಸುವ ಬದಲು, ಸಾಮೂಹಿಕವಾಗಿ ಹೊರಗಿಡಲು ಏಕೆ ಅವಕಾಶ ನೀಡುತ್ತೀರಿ?ಎಂದು ಪೀಠ ಪ್ರಶ್ನಿಸಿತು.
ಆಧಾರ್‌ನಂತಹ ದಾಖಲೆಗಳನ್ನು ಪರಿಗಣಿಸದಿರುವ ಮತ್ತು ಬಿಹಾರದ ಮತದಾರರ ಪಟ್ಟಿಯಿಂದ ದೊಡ್ಡ ಸಂಖ್ಯೆಯಲ್ಲಿ ಹೆಸರುಗಳನ್ನು ತೆಗೆದುಹಾಕಿರುವ ಬಗ್ಗೆ ಸಲ್ಲಿಕೆಯಾದ ಅರ್ಜಿಯ ವಿಚಾರಣೆ ನಡೆಯುತ್ತಿದೆ.
ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವುದನ್ನು ಪ್ರಶ್ನಿಸಿ ಅರ್ಜಿದಾರರು ಕೋರ್ಟ್ ಮೊರೆ ಹೋಗಿದ್ದಾರೆ. ಆಗಸ್ಟ್ 1 ರಂದು ಪ್ರಕಟವಾಗಲಿರುವ ಕರಡು ಪಟ್ಟಿಯನ್ನು ತಡೆಹಿಡಿಯುವಂತೆ ಅರ್ಜಿದಾರರು ಕೋರಿದ್ದಾರೆ. ಒಂದು ವೇಳೆ ಹೆಸರು ತೆಗೆದುಹಾಕಿದರೆ, ಪ್ರತಿಯೊಬ್ಬ ನಾಗರಿಕನು ಪ್ರತ್ಯೇಕವಾಗಿ ಪ್ರಶ್ನಿಸಬೇಕಾಗುತ್ತದೆ ಎಂದು ವಾದಿಸಿದ್ದಾರೆ.
ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್, ಕರಡು ಪಟ್ಟಿಯ ಪ್ರಕಟಣೆಗೆ ಮಧ್ಯಂತರ ತಡೆಯಾಜ್ಞೆ ನೀಡುವಂತೆ ಕೋರಿದರು.