ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆಯಲ್ಲಿ ಅಧಿವೇಶನದಲ್ಲಿ ಇಂದು ಆಪರೇಷನ್ ಸಿಂದೂರ್ ಕುರಿತು ಚರ್ಚೆ ಆರಂಭಗೊಂಡಿದೆ. ಆಪರೇಷನ್ ಸಿಂದೂರ್ ಕುರಿತ ಚರ್ಚೆಯನ್ನು ಸದನದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಾರಂಭಿಸಿದರು. ಆ ಬಳಿಕ ವಿದೇಶಾಂಗ ಸಚಿವ ಜೈ ಶಂಕರ್ ಮಾತನಾಡಿದ್ದು, ಕದನ ವಿರಾಮದ ಬಗ್ಗೆ ಇರುವ ಗೊಂದಲಕ್ಕೆ ಕೊನೆಗೂ ತೆರೆ ಎಳೆದಿದ್ದಾರೆ.
ಏಪ್ರಿಲ್ 22 ರಿಂದ ಜೂನ್ 17 ರವರೆಗೆ ಪ್ರಧಾನಿ ಮೋದಿ ಮತ್ತು ಟ್ರಂಪ್ ನಡುವೆ ಯಾವುದೇ ದೂರವಾಣಿ ಸಂಭಾಷಣೆ ನಡೆದಿಲ್ಲ ಎಂದು ಜೈಶಂಕರ್ ಹೇಳಿದ್ದಾರೆ. ಈ ಮೂಲಕ ಕದನ ವಿರಾಮದ ಬಗ್ಗೆ ಭಾರತ ಮತ್ತು ಅಮೆರಿಕ ನಡುವೆ ಯಾವುದೇ ಚರ್ಚೆಗಳು ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಪಾಕಿಸ್ತಾನದ ವಿರುದ್ಧ ಭಾರತ ನಡೆಸಿದ ಪ್ರತೀಕಾರದ ದಾಳಿಯ ನಂತರ, ಪಾಕಿಸ್ತಾನ ಆಕ್ರಮಣವನ್ನು ನಿಲ್ಲಿಸಲು ಇಚ್ಛಿಸುತ್ತಿದೆ ಎಂದು ಸೂಚಿಸುವ ಫೋನ್ ಕರೆಗಳು ಭಾರತಕ್ಕೆ ಬಂದಿವೆ ಎಂದು ಜೈಶಂಕರ್ ಬಹಿರಂಗಪಡಿಸಿದರು. ಆದಾಗ್ಯೂ, ಅಂತಹ ಯಾವುದೇ ರೀತಿಯ ವಿನಂತಿಗಳು ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರಿಂದ (DGMO) ಔಪಚಾರಿಕವಾಗಿ ಬರಬೇಕು ಎಂದು ಭಾರತ ಸ್ಪಷ್ಟಪಡಿಸಿತು.
ಪಾಕಿಸ್ತಾನದ ಪರಮಾಣು ಬೆದರಿಕೆಗೆ ನಾವು ಮಣಿಯುವುದಿಲ್ಲ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ. ಆಪರೇಷನ್ ಸಿಂದೂರ್ ಇನ್ನೂ ನಡೆಯುತ್ತಿದೆ. ಟಿಆರ್ಎಫ್ ಕುರಿತು ಜೈಶಂಕರ್ ಮಾತನಾಡಿ, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಜವಾಬ್ದಾರಿಯನ್ನು ಟಿಆರ್ಎಫ್ ಎರಡು ಬಾರಿ ವಹಿಸಿಕೊಂಡಿದೆ. ಆದರೆ ಪಾಕಿಸ್ತಾನ ಮಾತ್ರ ಅದನ್ನು ನಿರಾಕರಿಸುತ್ತಿದೆ. ಟಿಆರ್ಎಫ್ ಅನ್ನು ಜಾಗತಿಕ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಲಾಗಿದೆ. ಆದರೆ ಪಾಕಿಸ್ತಾನ ಇನ್ನೂ ಟಿಆರ್ಎಫ್ ಅನ್ನು ಸಮರ್ಥಿಸುತ್ತಿದೆ ಎಂದು ಹೇಳಿದ್ದಾರೆ.