February 7, 2026
Saturday, February 7, 2026
spot_img

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ: ಇನ್ಮುಂದೆ ಈ ವಸ್ತುಗಳಿಗೆ 0 ಪರ್ಸೆಂಟ್ ಟ್ಯಾರೀಫ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್: :

ಭಾರತ-ಅಮೆರಿಕ ವ್ಯಾಪಾರ ಒಪ್ಪಂದದಡಿಯಲ್ಲಿ ಹಲವಾರು ಅಮೆರಿಕ ಉತ್ಪನ್ನಗಳು ಭಾರತದಲ್ಲಿ ಶೂನ್ಯ ಸುಂಕವನ್ನು ಎದುರಿಸಬೇಕಾಗುತ್ತದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.

ಗೋಯಲ್ ಅವರ ಪ್ರಕಾರ, ಹಲವು ಆಯ್ದ ಭಾರತೀಯ ಉತ್ಪನ್ನಗಳಿಗೆ ಅಮೆರಿಕದ ಮಾರುಕಟ್ಟೆಯಲ್ಲಿ ಸಂಪೂರ್ಣ ಸುಂಕ ಮುಕ್ತ ಪ್ರವೇಶ ದೊರಕಿದೆ. ಕೃಷಿ ಕ್ಷೇತ್ರದಲ್ಲಿ ಭಾರತೀಯ ಮಸಾಲೆಗಳು, ಚಹಾ, ಕಾಫಿ, ತೆಂಗಿನಕಾಯಿ ಮತ್ತು ತೆಂಗಿನ ಎಣ್ಣೆ, ಅಡಿಕೆ, ಗೋಡಂಬಿ, ಚೆಸ್ಟ್ನಟ್, ವಿವಿಧ ತರಕಾರಿಗಳು ಹಾಗೂ ಹಣ್ಣುಗಳಾದ ಮಾವು, ಬಾಳೆಹಣ್ಣು, ಕಿವಿ, ಅನಾನಸ್, ಅಣಬೆಗಳು, ಸಂಸ್ಕರಿಸಿದ ಹಣ್ಣುಗಳು ಮತ್ತು ಅನಾನಸ್ ಜಾಮ್ ಸೇರಿ ಇನ್ನಿತರ ಉತ್ಪನ್ನಗಳ ಮೇಲೆ ಈಗ ಶೂನ್ಯ ಸುಂಕದಡಿ ಅಮೆರಿಕಕ್ಕೆ ರಫ್ತು ಆಗಲಿವೆ.

ಆಲ್ಕೊಹಾಲ್ಯುಕ್ತ ಪಾನೀಯಗಳು, ಸೌಂದರ್ಯವರ್ಧಕಗಳು ಹಾಗೂ ವೈದ್ಯಕೀಯ ಸಾಧನಗಳು ಹಲವಾರು ಉತ್ಪನ್ನಗಳು ಶೂನ್ಯ ಸುಂಕದಡಿ ಬರಲಿದೆ. ಇದರಿಂದಾಗಿ ಉತ್ಪನ್ನಗಳು ಮಾರುಕಟ್ಟೆಗೆ ಬಂದಾಗ ಸ್ಪರ್ಧೆ ಹೆಚ್ಚಾಗುವುದು. ಗ್ರಾಹಕರಿಗೆ ಉತ್ತಮ ಗುಣಮಟ್ಟದ ವಸ್ತುಗಳು ದೊರೆಯಲಿದ್ದು, ಉತ್ಪನ್ನಗಳ ಬೆಲೆ ಕಡಿಮೆಯಾಗುತ್ತದೆ ಎಂದು ಗೋಯಲ್ ಅವರು ಹೇಳಿದರು.

ಕೆಲವು ವಾಹನ ಹಾಗೂ ವಿಮಾನ ಭಾಗಗಳಿಗೆ ಅಮೆರಿಕದಲ್ಲಿ ಭಾರತಕ್ಕೆ ಸುಂಕಮುಕ್ತ (ಡ್ಯೂಟಿ ಫ್ರೀ) ಪ್ರವೇಶ ದೊರೆಯಲಿದೆ ಎಂದು ಪಿಯೂಷ್ ಗೋಯಲ್ ಅವರು ಹೇಳಿದರು.

ಪಶುಸಂಗೋಪನೆಯಲ್ಲಿ ಬಳಸುವ ಡಿಸ್ಟಿಲರ್ಸ್ ಡ್ರೈಡ್ ಗ್ರೇನ್ಸ್ ವಿತ್ ಸೊಲ್ಯೂಬಲ್ಸ್ (DDGS),ವೈನ್‌, ಮದ್ಯ ಹಾಗೂ ಇತರ ಆಲ್ಕೊಹಾಲ್ಯುಕ್ತ ಪಾನೀಯಗಳು, ಕೆಲವು ಕ್ಯಾನ್ಸರ್ ಔಷಧಿಗಳನ್ನು ಒಳಗೊಂಡಂತೆ ಆಯ್ದ ಔಷಧಿಗಳು, ಸೌಂದರ್ಯವರ್ಧಕ ವಸ್ತುಗಳು,ಸಾವಯವ ಮತ್ತು ಅಜೈವಿಕ ರಾಸಾಯನಿಕಗಳು,ಕಂಪ್ಯೂಟರ್ ಸಂಬಂಧಿತ ಉತ್ಪನ್ನಗಳು , ಸೂಕ್ಷ್ಮದರ್ಶಕಗಳಂತಹ ಕೆಲವು ವೈದ್ಯಕೀಯ ಸಾಧನಗಳು ಕನಿಷ್ಠ ಆಮದು ಬೆಲೆಯನ್ನು ನಿಗದಿಪಡಿಸಲಾಗಿದೆ ಎಂದು ಗೋಯಲ್ ಹೇಳಿದರು.

ಭಾರತದಿಂದ ಅಮೆರಿಕಕ್ಕೆ ರಫ್ತು ಮಾಡುವ ಹಲವು ಉತ್ಪನ್ನಗಳಿಗೆ ಶೂನ್ಯ ಸುಂಕ ವಿಧಿಸಲಾಗುತ್ತದೆ. ರತ್ನ ಮತ್ತು ವಜ್ರಗಳಿಗೆ ಶೂನ್ಯ ಸುಂಕ ವಿಧಿಸಲಾಗುತ್ತದೆ. ಭಾರತದಿಂದ ಹೆಚ್ಚಿನ ಪ್ರಮಾಣದಲ್ಲಿ ರಫ್ತಾಗುವ ಔಷಧಿ ಉತ್ಪನ್ನಗಳಿಗೂ ಶೂನ್ಯ ಸುಂಕ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ.

ಭಾರತದಿಂದ ದೊಡ್ಡ ಪ್ರಮಾಣದಲ್ಲಿ ಅಮೆರಿಕಕ್ಕೆ ರಫ್ತು ಆಗುವ ಸ್ಮಾರ್ಟ್‌ಫೋನ್‌ಗಳಿಗೂ ಶೂನ್ಯ ಸುಂಕ ಮುಂದುವರಿಯಲಿದೆ. ಈ ರೀತಿಯಾಗಿ ಮುಂದಿನ ದಿನಗಳಲ್ಲಿ ಶೂನ್ಯ ಸುಂಕ ಅನ್ವಯವಾಗುವ ಅನೇಕ ವಸ್ತುಗಳಿವೆ ಎಂದು ಗೋಯಲ್ ಹೇಳಿದರು.

ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಕುರಿತು ಭಾರತ-ಯುಎಸ್ ಜಂಟಿ ಹೇಳಿಕೆಯ ಕುರಿತು ವಿವರಿಸಿದ ಗೋಯಲ್, ಭಾರತ ಕೃಷಿ ವಲಯದಲ್ಲಿ ಸ್ವಾವಲಂಬಿಯಾಗಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ಆಮದು ಪ್ರಯೋಜನಗಳಿಲ್ಲದ ಉತ್ಪನ್ನಗಳ ಪಟ್ಟಿಯಲ್ಲಿ ಮಾಂಸ, ಕೋಳಿ, ಡೈರಿ, ಸೋಯಾಬೀನ್, ಮೆಕ್ಕೆಜೋಳ, ಅಕ್ಕಿ, ಗೋಧಿ, ಧಾನ್ಯಗಳು, ರಾಗಿ, ಹಣ್ಣುಗಳು, ಗ್ರೀನ್ ಟೀ, ಎಣ್ಣೆ ಬೀಜಗಳು, ನೆಲಗಡಲೆ, ಜೇನುತುಪ್ಪ, ಆಲ್ಕೊಹಾಲ್ಯುಕ್ತವಲ್ಲದ ಪಾನೀಯಗಳು, ಎಥೆನಾಲ್ ಮತ್ತು ತಂಬಾಕು ಸೇರಿವೆ ಎಂದು ಹೇಳಿದರು.

ಮಸಾಲೆಗಳು, ಚಹಾ, ಕಾಫಿ ಹಾಗೂ ಅವುಗಳ ಉಪ ಉತ್ಪನ್ನಗಳು, ತೆಂಗು ಮತ್ತು ತೆಂಗಿನೆಣ್ಣೆ, ಸಸ್ಯ ಜನ್ಯ, ಅಡಿಕೆ, ಬ್ರೆಜಿಲ್ ನಟ್, ಗೋಡಂಬಿ, ಚೆಸ್ಟ್ನಟ್ ಸೇರಿದಂತೆ ಅನೇಕ ಹಣ್ಣುಗಳು ಮತ್ತು ತರಕಾರಿಗಳಿಗೆ ಶೂನ್ಯ ಸುಂಕ ವಿಧಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !