ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೆಪ್ಟೆಂಬರ್ 30ರಂದು ಫ್ಲೈದುಬೈವಿಮಾನದಲ್ಲಿ ಸಂಭವಿಸಬಹುದಾಗಿದ್ದ ಭೀಕರ ದುರಂತವನ್ನು ತಪ್ಪಿಸಿ, 180 ಜನರ ಪ್ರಾಣ ಉಳಿಸಿದ ಹೀರೋ ಕ್ಯಾಪ್ಟನ್ ಸ್ಮಿತ್ ಮಚ್ಛರ್, ಕಾಕ್ಪಿಟ್ ಒಳಗಡೆ ಸಹ-ಪೈಲಟ್ ತನಗೇ ಹಲ್ಲೆ ಮಾಡಿದ ಆ ಭೀಕರ ಕ್ಷಣಗಳನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ಯುಎಇಯ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಅಂದು ನಡೆದ ಆ ಭೀಕರ ಘಟನೆಯನ್ನು ಬಿಚ್ಚಿಟ್ಟಿದ್ದಾರೆ.
‘ವಿಮಾನವೇ ಮುರಿದು ತಲೆಮೇಲೆ ಬಿದ್ದಂತಾಯಿತು’
ಕ್ಯಾಪ್ಟನ್ ಸ್ಮಿತ್ ಆ ಕ್ಷಣವನ್ನು ನೆನಪಿಸಿಕೊಳ್ಳುತ್ತಾ, ಮೊದಲ ಬಾರಿ ತಲೆಗೆ ಪೆಟ್ಟು ಬಿದ್ದಾಗ, ವಿಮಾನದ ಯಾವುದೇ ಭಾಗ ಮುರಿದು ನನ್ನ ತಲೆಯ ಮೇಲೆ ಬಿದ್ದಿರಬೇಕು ಎಂದುಕೊಂಡೆ. ನಾನು ಸೀಟಿನ ಮೇಲೆಯೇ ಬೀಳುವಂತಾಗಿದ್ದೆ. ಆದರೆ ಮುಂದಿನ ಕೆಲವು ಸೆಕೆಂಡುಗಳಲ್ಲಿ ಪೆಟ್ಟುಗಳು ಬೀಳುತಿದ್ದಂತೆ, ನನ್ನ ಜೊತೆಗಿದ್ದ ಸಹ-ಪೈಲಟ್ ನನ್ನ ಮೇಲೆಯೇ ದಾಳಿ ಮಾಡುತ್ತಿದ್ದಾನೆ ಎಂಬ ಆಘಾತಕಾರಿ ಸತ್ಯ ತಿಳಿಯಿತು ಎಂದಿದ್ದಾರೆ.
ಕಣ್ಣು ಮಂಜಾಯಿತು, ಪ್ರಜ್ಞೆ ತಪ್ಪಿ ಬಿದ್ದೆ
“ನಾನು ತಕ್ಷಣವೇ ಸೀಟ್ ಬೆಲ್ಟ್ ತೆಗೆಯಲು ಯತ್ನಿಸಿದೆ. ಆದರೆ ಪೆಟ್ಟುಗಳು ಸೀದಾ ತಲೆಗೇ ಬೀಳುತ್ತಿದ್ದರಿಂದ ಅದನ್ನು ತಡೆಯಲು ಕೈಗಳನ್ನು ಅಡ್ಡ ಇಟ್ಟೆ. ಆಗಲೇ ನನ್ನ ಕಣ್ಣುಗಳು ಮಂಜಾಗಲು ಶುರುವಾದವು, ಕೇವಲ ವಸ್ತುಗಳ ಮಾತ್ರ ಕಾಣಿಸುತ್ತಿತ್ತು. ಆದರೂ ಧೈರ್ಯ ಗುಂದದೆ ಕಾಕ್ಪಿಟ್ ಬಾಗಿಲು ತೆರೆಯುವ ನಾಬ್ ಕಡೆಗೆ ಕೈ ಚಾಚಿ, ಸಹೋದ್ಯೋಗಿಗಳನ್ನು ಕೂಗಿ ಕರೆದೆ. ಅಷ್ಟರಲ್ಲೇ ನಾನು ಪ್ರಜ್ಞೆ ಕಳೆದುಕೊಂಡು ಕಾಕ್ಪಿಟ್ ಒಳಗಡೆ ಮುಖ ಕೆಳಗಾಗಿ ಬಿದ್ದಿದ್ದೆ” ಎಂದು ಸ್ಮಿತ್ ವಿವರಿಸಿದ್ದಾರೆ.
17,000 ಅಡಿ ಕೆಳಗೆ ಜಾರಿದ ವಿಮಾನ
ವಿಮಾನವನ್ನು ಕ್ರಾಶ್ ಮಾಡಲು ಒಮಾನಿ ಮೂಲದ ಸಹ-ಪೈಲಟ್ ಹಮಾಮ್ ಅಲ್-ಹಮಾಮಿ ಸಂಚು ರೂಪಿಸಿದ್ದ. ದಾಳಿಯ ಬೆನ್ನಲ್ಲೇ ವಿಮಾನವು ದಿಢೀರನೆ 17,000 ಅಡಿ ಕೆಳಗೆ ಜಾರತೊಡಗಿತು. “ಆ ಸಮಯದಲ್ಲಿ ವಿಮಾನದ ಎಂಜಿನ್ಗಳು ಆಫ್ ಆಗುತ್ತಿದ್ದ ಸದ್ದು ನನ್ನ ಜೀವನದಲ್ಲೇ ನಾನು ಕೇಳಿದ ಭಯಾನಕ ಸದ್ದಾಗಿತ್ತು” ಎನ್ನುತ್ತಾರೆ ಸ್ಮಿತ್.
ಪ್ರಯಾಣಿಕರ ಸಹಾಯದಿಂದ ಪಾರಾದ ಜೀವಗಳು
ಕ್ಯಾಪ್ಟನ್ ಸ್ಮಿತ್ ಪ್ರಜ್ಞೆ ತಪ್ಪುವ ಮುನ್ನ ಕಾಕ್ಪಿಟ್ ಬಾಗಿಲಿನ ಲಾಕ್ ತೆಗೆದಿದ್ದರಿಂದ, ತಕ್ಷಣವೇ ಅಲರ್ಟ್ ಆದ ವಿಮಾನದ ಸಿಬ್ಬಂದಿ ಮತ್ತು ಪ್ರಯಾಣಿಕರು ಒಳಗೆ ನುಗ್ಗಿ ಸಹ-ಪೈಲಟ್ನನ್ನು ಕಟ್ಟಿಹಾಕಿದರು. ಬಳಿಕ ಹೈಜಾಕ್ ಸಂದೇಶ ರವಾನಿಸಿ, ಸೌದಿ ಅರೇಬಿಯಾದ ತಬೂಕ್ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡುವಲ್ಲಿ ಯಶಸ್ವಿಯಾದರು. ಅದೃಷ್ಟವಶಾತ್ ಎಲ್ಲಾ 180 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ:
ಏವಿಯೇಷನ್ ಮೇಲಿನ ಪ್ರೀತಿ ಕಮ್ಮಿಯಾಗಿಲ್ಲ
\ಪ್ರಸ್ತುತ ಅಬುಧಾಬಿಯ ಜಾಯೆದ್ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸ್ಮಿತ್, “ಈ ಘಟನೆಯಿಂದ ವಿಮಾನ ಹಾರಾಟದ ಮೇಲಿನ ನನ್ನ ಪ್ರೀತಿಯೇನೂ ಕಡಿಮೆಯಾಗಿಲ್ಲ. ಕಠಿಣ ಸಮಯದಲ್ಲಿ ನನ್ನ ಕರ್ತವ್ಯವನ್ನು ನಾನು ನಿಭಾಯಿಸಿದೆ ಎಂಬ ಹೆಮ್ಮೆ ನನಗಿದೆ” ಎಂದಿದ್ದಾರೆ.
ಕ್ಯಾಪ್ಟನ್ ಸ್ಮಿತ್ ಅವರ ಈ ಅಪ್ರತಿಮ ಸಾಹಸಕ್ಕಾಗಿ ಇಸ್ರೇಲ್ ಅಧ್ಯಕ್ಷರು ಅಲ್ಲಿನ ಅತ್ಯುನ್ನತ ನಾಗರಿಕ ಪ್ರಶಸ್ತಿ ಹಾಗೂ ಗುಜರಾತ್ ಸರ್ಕಾರ ‘ವಿಶಿಷ್ಟ ಗುಜರಾತ್ ಗರಿಮಾ ಪ್ರಶಸ್ತಿ’ ಘೋಷಿಸಿ ಗೌರವಿಸಿವೆ.



