ಹೊಸದಿಗಂತ ಡಿಜಿಟಲ್ ಡೆಸ್ಕ್:
10 ಸಾವಿರ ರೂ.ಗಳ ಲಂಚ ಪಡೆಯುತ್ತಿದ್ದ ಗ್ರಾಪಂ ದ್ವಿತೀಯ ದರ್ಜೆ ಸಹಾಯಕನೊಬ್ಬ ಲೋಕಾಯುಕ್ತರ ಬಲೆಗೆ ಬಿದ್ದಿರುವ ಘಟನೆ ಜಿಲ್ಲೆಯ ಕೊಲ್ಹಾರ ತಾಲೂಕಿನ ಮುಳವಾಡ ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ನಡೆದಿದೆ.
ಇಲ್ಲಿನ ದ್ವಿತೀಯ ದರ್ಜೆಯ ಸಹಾಯಕ ಮಲ್ಲಪ್ಪ ಸಾಬು ಹೊಸಕೇರಿ ಲೋಕಾ ಬಲೆಗೆ ಬಿದ್ದ ಆರೋಪಿ.
ಮಲ್ಲಪ್ಪ ಹೊಸಕೇರಿ ಈತ ಮುಳವಾಡ ಕೆಐಎಡಿಬಿ ವಸಾಹತು ಪ್ರದೇಶದ ನಿವೇಶನದ ಇ- ಸ್ವತ್ತು ಉತಾರೆ ನೀಡಲು 10,000 ರೂ.ಗಳ ಬೇಡಿಕೆ ಇಟ್ಟಿದ್ದ, ಈ ಕುರಿತು ಫಿರ್ಯಾದಿದಾರರು ದೂರು ನೀಡಿದ ಹಿನ್ನೆಲೆ, ಆರೋಪಿ ಮಲ್ಲಪ್ಪ ಹೊಸಕೇರಿ 10 ಸಾವಿರ ರೂ. ಲಂಚ ಪಡೆಯುವಾಗ, ಲೋಕಾ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.
ಲೋಕಾಯುಕ್ತ ಎಸ್ಪಿ ಟಿ. ಮಲ್ಲೇಶ್ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸಪೆಕ್ಟರ್ ಆನಂದ ಟಕ್ಕನ್ನವರ್, ಆನಂದ ಡೋಣಿ ಹಾಗೂ ಸಿಬ್ಬಂದಿ ತಂಡ ಈ ಕಾರ್ಯಾಚರಣೆ ನಡೆಸಿದೆ.