ಪುರುಷರು ಮತ್ತು ಮಹಿಳೆಯರ ಉಡುಗೆಯಲ್ಲಿ ಬಹುಮಾನ್ಯವಾದ ವ್ಯತ್ಯಾಸಗಳಿವೆ. ಶರ್ಟ್ ಬಟನ್‌ಗಳ ಇಡುವ ವಿಧಾನವೂ ಅದರಲ್ಲೊಂದು. ಸಾಮಾನ್ಯವಾಗಿ ಪುರುಷರ ಶರ್ಟ್‌ಗಳಲ್ಲಿ ಬಟನ್‌ಗಳು ಬಲಭಾಗದಲ್ಲಿ ಇರುತ್ತವೆ, ಆದರೆ ಮಹಿಳೆಯ ಶರ್ಟ್‌ಗಳಲ್ಲಿ ಬಟನ್‌ಗಳು ಎಡಭಾಗದಲ್ಲಿ ಇರುತ್ತವೆ. ಇದು ಕೇವಲ ಫ್ಯಾಷನ್ ಟ್ರೆಂಡ್ ಅಲ್ಲ, ಇತಿಹಾಸದಲ್ಲಿ ಬೇರೆ ಬೇರೆ ಕಾರಣಗಳಿಂದ ಹುಟ್ಟಿದ ವಿನ್ಯಾಸವಿದು.
ನೆಪೋಲಿಯನ್ ಬೊನಪಾರ್ಟೆ ಆದೇಶ:
ಒಂದು ಜನಪ್ರಿಯ ಕಥೆ ಪ್ರಕಾರ, ಫ್ರೆಂಚ್ ಸಾಮ್ರಾಟ್ ನೆಪೋಲಿಯನ್ ಬೊನಪಾರ್ಟೆ ತಮ್ಮ ಶೈಲಿಯಲ್ಲಿ ಶರ್ಟ್ ಒಳಗೆ ಕೈ ಹಾಕಿ ನಿಂತು ಮಾತನಾಡುತ್ತಿದ್ದರು. ಮಹಿಳೆಯರು ಇದನ್ನು ನಕಲಿಸಿ ಗೇಲಿ ಮಾಡಿದರಂತೆ. ಇದರಿಂದ ಕೋಪಗೊಂಡ ನೆಪೋಲಿಯನ್, ಮಹಿಳೆಯರ ಬಟ್ಟೆಯಲ್ಲಿ ಬಟನ್‌ಗಳನ್ನು ಎಡಭಾಗದಲ್ಲಿ ಇಡುವಂತೆ ಆದೇಶಿಸಿದರು ಎನ್ನಲಾಗುತ್ತದೆ.
ಅಗತ್ಯಕ್ಕೆ ತಕ್ಕ ವಿನ್ಯಾಸ:
ಇತಿಹಾಸದಲ್ಲಿ ಪುರುಷರು ಬಹುತೇಕ ತಾವು ತಾವೇ ಬಟ್ಟೆ ತೊಡುವವರಾಗಿದ್ದರೆ, ಮಹಿಳೆಯರಿಗೆ ಸೇವಕಿಯರ ನೆರವು ಬೇಕಾಗುತ್ತಿತ್ತು. ಸೇವಕಿಯರು ಎದುರು ನಿಂತು ಬಟ್ಟೆ ತೊಡಿಸುತ್ತಿದ್ದರಿಂದ, ಬಟನ್‌ಗಳನ್ನು ಎಡಬದಿಯಲ್ಲಿ ಇಡುವುದು ಸಹಜವಾಗಿತ್ತಂತೆ.
ಕುದುರೆ ಸವಾರಿ ಅನುಕೂಲತೆ:
ಹಳೆಯ ಕಾಲದಲ್ಲಿ ಮಹಿಳೆಯರು ಕುದುರೆ ಸವಾರಿ ಮಾಡುವಾಗ ಬಟ್ಟೆ ಗಾಳಿಯಿಂದ ಹಾರದಂತೆ ತಡೆಯಲು ಎಡಬದಿಯ ಬಟನ್ ವಿನ್ಯಾಸ ಉಪಯುಕ್ತವಾಯಿತು. ಇದು ಹೆಚ್ಚು ರಕ್ಷಣಾತ್ಮಕ ಮತ್ತು ಅನೂಕೂಲವಾಗಿದೆ ಎಂದು ಹೇಳಲಾಗಿತ್ತು.
ಮಗು ಹಿಡಿದ ಮಹಿಳೆಯರಿಗೆ ಅನುಕೂಲ:
ಹೆಣ್ಣುಮಕ್ಕಳು ಎಡಗೈಯಲ್ಲಿ ಮಗುವನ್ನು ಹಿಡಿದಿರುವ ಸಂದರ್ಭದಲ್ಲಿ ಬಲಗೈ ಬಳಸಿ ಶರ್ಟ್ ತೆಗೆಯುವಂತೆ ಬಟನ್‌ಗಳನ್ನು ಎಡಭಾಗದಲ್ಲಿ ವಿನ್ಯಾಸಗೊಳಿಸಲಾಗಿದೆ. ಇದು ಆ ಕಾಲದ ಸಾಮಾಜಿಕ ವ್ಯವಸ್ಥೆಗೆ ತಕ್ಕಂತೆ ರೂಪುಗೊಂಡಿತ್ತು.
ಇವೆಲ್ಲಾ ಕಥೆಗಳಿಗೆ ಪೂರಕವಾಗಿ ದೃಢವಾದ ಪುರಾವೆಗಳಿಲ್ಲದಿದ್ದರೂ, ಇಂದು ಈ ವಿನ್ಯಾಸಗಳು ರೂಢಿಯಂತೆ ಸಾಗುತ್ತಿವೆ. ಯುನಿಸೆಕ್ಸ್ ಫ್ಯಾಷನ್ ಹೆಚ್ಚುತ್ತಿರುವ ಇತ್ತೀಚಿನ ಕಾಲದಲ್ಲೂ ಈ ಸಂಪ್ರದಾಯ ಅರ್ಥವಿಲ್ಲದಂತೆಯಾದರೂ, ಮುಂದುವರೆದಿರುತ್ತದೆ.