ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಮ್ಯಾ ಹಾಗೂ ನಟ ದರ್ಶನ್ ಅಭಿಮಾನಿಗಳ ನಡುವೆ ನಡೆಯುತ್ತಿರುವ ಸೋಷಿಯಲ್ ಮೀಡಿಯಾ ಯುದ್ಧ ಇದೀಗ ಇನ್ನಷ್ಟು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕರ್ನಾಟಕಾದ್ಯಂತ ದೊಡ್ಡ ಚರ್ಚೆಯ ವಿಷಯವಾಗಿದೆ. ದರ್ಶನ್ ವಿರುದ್ಧದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ನಿಂದ ನ್ಯಾಯ ಸಿಗಬೇಕೆಂಬ ಆಶಯವನ್ನು ವ್ಯಕ್ತಪಡಿಸಿದ್ದ ರಮ್ಯಾ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದರು.
ಈ ಪೋಸ್ಟ್‌ನ ಬಳಿಕ, ‘ಡಿ ಬಾಸ್ ಫ್ಯಾನ್ಸ್’ ಹೆಸರಿನಲ್ಲಿ ಕೆಲಸಮಾಡುತ್ತಿರುವ ಕೆಲವು ಅಕೌಂಟ್‌ಗಳಿಂದ ರಮ್ಯಾಗೆ ಅಶ್ಲೀಲ ಮತ್ತು ತೀವ್ರವಾಗಿ ದೂಷಣೆಯ ಸಂದೇಶಗಳು ಬಂದಿರುವುದಾಗಿ ನಟಿ ದೂರಿದ್ದು, ಅವರು ಮಹಿಳಾ ಆಯೋಗ ಹಾಗೂ ಪೊಲೀಸ್ ಕಮೀಷನರ್‌ಗೆ ಅಧಿಕೃತವಾಗಿ ದೂರು ನೀಡಿದ್ದಾರೆ. ಈ ಹಿನ್ನೆಲೆ 43ಕ್ಕೂ ಹೆಚ್ಚು ದರ್ಶನ್ ಅಭಿಮಾನಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಈ ಗಲಾಟೆಗೆ ಬೆಂಬಲವಾಗಿ ಸ್ಯಾಂಡಲ್‌ವುಡ್‌ನ ಹಲವು ಪ್ರಮುಖರು ರಮ್ಯಾ ಪರ ಧ್ವನಿ ಎತ್ತಿದ್ದಾರೆ. ನಟ ಶಿವರಾಜ್ ಕುಮಾರ್, ಪ್ರಥಮ್, ಲೂಸ್ ಮಾದ ಯೋಗೇಶ್, ಅಹಿಂಸಾ ಚೇತನ್ ಹಾಗೂ ನಟಿ ಅನುಪಮಾ ಗೌಡ ಸೇರಿದಂತೆ ಹಲವರು ರಮ್ಯಾ ಅವರ ಧೈರ್ಯಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ರಮ್ಯಾ ಕೂಡಾ, “ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು. ನಾನು ಸದಾ ಚಿರಋಣಿ” ಎಂದು ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಇದೀಗ ಈ ವಿವಾದದ ಕುರಿತು ಖ್ಯಾತ ನಿರ್ಮಾಪಕ ಕೆ. ಮಂಜು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಇಬ್ಬರೂ ಪಕ್ಷಗಳನ್ನೂ ಪ್ರಶ್ನಿಸಿದ್ದಾರೆ. “ರಮ್ಯಾ ಅವರು ದರ್ಶನ್ ವಿಚಾರದಲ್ಲಿ ಇದೀಗ ಮತ್ತೆ ಪೋಸ್ಟ್ ಮಾಡುವುದು ಸೂಕ್ತವಲ್ಲ. ಈಗ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದೆ. ಹೀಗಿರುವಾಗ ಮತ್ತೊಮ್ಮೆ ಕಾಮೆಂಟ್ ಮಾಡಿದ್ಧರಿಂದ ಗಲಾಟೆ ಹೆಚ್ಚಾಗಿದೆ,” ಎಂದು ಅವರು ಹೇಳಿದ್ದಾರೆ. ಜೊತೆಗೆ ದರ್ಶನ್ ಅಭಿಮಾನಿಗಳ ಅತಿರೇಕದ ವರ್ತನೆಗೂ ತೀವ್ರ ಭಿತ್ತಿಹಾಕಿದ್ದಾರೆ.
“ಯಾವ ಸ್ಟಾರ್ ಆದ್ರೂ ತಮ್ಮ ಅಭಿಮಾನಿಗಳಿಗೆ ಗಲಾಟೆ ಮಾಡು ಎಂದು ಹೇಳಲ್ಲ. ಅಭಿಮಾನಿಗಳ ವರ್ತನೆಯೂ ತಪ್ಪು, ರಮ್ಯಾ ಅವರ ಹೇಳಿಕೆಯೂ ತಪ್ಪು,” ಎಂದು ಕೆ. ಮಂಜು ಹೇಳಿದ್ದು, ಈ ಮೂಲಕ ಸ್ಯಾಂಡಲ್‌ವುಡ್‌ನ ಈ ಸಂಘರ್ಷ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಮುಂದೇನು ನಡೆಯಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.