ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಮತ್ತು ರಷ್ಯಾದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ತಮ್ಮ ಟ್ರೂತ್ ಸೋಶಿಯಲ್ ಹ್ಯಾಂಡಲ್ ನಲ್ಲಿ ಪೋಸ್ಟ್ ಮಾಡಿ, ಭಾರತವು ರಷ್ಯಾದೊಂದಿಗೆ ಏನು ಮಾಡುತ್ತದೆ ಎಂಬುದು ನನಗೆ ಮುಖ್ಯವಲ್ಲ. ರಷ್ಯಾ ಮತ್ತು ಭಾರತ ಏನು ಮಾಡಲಿವೆ ಎಂಬುದರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿರುವ ಡೊನಾಲ್ಡ್ ಟ್ರಂಪ್, ಎರಡೂ ರಾಷ್ಟ್ರಗಳು ತಮ್ಮ ಸತ್ತ ಆರ್ಥಿಕತೆಗಳೊಂದಿಗೆ ಇನ್ನಷ್ಟು ಮುಳುಗಲಿದೆ ಎಂದು ವ್ಯಂಗ್ಯವಾಡಿದ್ದಾರೆ.
ಆಗಸ್ಟ್ 1 ರಿಂದ ಜಾರಿಗೆ ಬರುವಂತೆ ಭಾರತೀಯ ಸರಕುಗಳ ಮೇಲೆ ಶೇ. 25 ರಷ್ಟು ಸುಂಕ ವಿಧಿಸುವುದಾಗಿ ಟ್ರಂಪ್ ಘೋಷಿಸಿದ ನಂತರ ತಮ್ಮ ಪ್ರತಿಕ್ರಿಯೆ ಮುಂದುವರಿಸಿದ್ದಾರೆ. ಹೆಚ್ಚಿನ ವ್ಯಾಪಾರ ಅಡೆತಡೆಗಳು ಮತ್ತು ರಷ್ಯಾದಿಂದ ಮಿಲಿಟರಿ ಉಪಕರಣಗಳು ಮತ್ತು ಇಂಧನ ಖರೀದಿಯನ್ನು ಉಲ್ಲೇಖಿಸಿ ಅವರು ಈ ಹೇಳಿಕೆ ನೀಡಿದ್ದಾರೆ.
ಈ ಹೇಳಿಕೆಯು ಭಾರತದಲ್ಲಿ ಬಲವಾದ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ, ಪ್ರತಿಪಕ್ಷಗಳು, ಅಮೆರಿಕ ಅಧ್ಯಕ್ಷರು ರಾಜತಾಂತ್ರಿಕ ಸಂಬಂಧಗಳನ್ನು ದುರ್ಬಲಗೊಳಿಸುತ್ತಿದ್ದಾರೆ, ಜಾಗತಿಕ ಮೈತ್ರಿಗಳನ್ನು ರೂಪಿಸಲು ಬಲವಂತದ ತಂತ್ರಗಳನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿವೆ.
‘ಭಾರತ ರಷ್ಯಾ ಜೊತೆ ಏನು ಮಾಡುತ್ತದೆ ಎಂಬುದು ಅಮೆರಿಕಕ್ಕೆ ಸಮಸ್ಯೆಯಲ್ಲ. ರಷ್ಯಾ ಮತ್ತು ಭಾರತ ತಮ್ಮ ಕುಸಿದ ಆರ್ಥಿಕತೆಗಳೊಂದಿಗೆ ಇನ್ನಷ್ಟು ಮುಳುಗಲಿದೆ. ಅಮೆರಿಕ ಭಾರತದೊಂದಿಗೆ ಬಹಳ ಕಡಿಮೆ ವ್ಯಾಪಾರ ಮಾಡುತ್ತದೆ. ಆದರೆ ಭಾರತವು ಅಮೆರಿಕದ ಉತ್ಪನ್ನಗಳ ಮೇಲೆ ಅತಿ ಹೆಚ್ಚು ಸುಂಕಗಳನ್ನು ವಿಧಿಸುತ್ತದೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಸುಂಕಗಳನ್ನು ಹೊಂದಿದೆ. ಅದೇ ರೀತಿ, ಅಮೆರಿಕವು ರಷ್ಯಾದೊಂದಿಗೆ ಹೆಚ್ಚು ವ್ಯಾಪಾರ ಮಾಡುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.
ನಿನ್ನೆ ಭಾರತೀಯ ಆರ್ಥಿಕತೆಗೆ ಹಿನ್ನಡೆಯಾಗುವಂತೆ ಅಮೆರಿಕ ನಿರ್ಣಾಯಕ ಘೋಷಣೆ ಮಾಡಿತ್ತು. ಭಾರತೀಯ ಉತ್ಪನ್ನಗಳ ಆಮದಿನ ಮೇಲೆ ಶೇ.25 ತೆರಿಗೆ ಮತ್ತು ರಷ್ಯಾದಿಂದ ತೈಲ ಮತ್ತು ಶಸ್ತ್ರಾಸ್ತ್ರಗಳನ್ನು ಖರೀದಿಸಿದ್ದಕ್ಕೆ ಅನಿರ್ದಿಷ್ಟ ದಂಡವನ್ನು ಅಮೆರಿಕ ವಿಧಿಸಿದೆ.
ರಷ್ಯಾ ಜೊತೆಗಿನ ವ್ಯಾಪಾರ ಒಪ್ಪಂದಗಳು ಮತ್ತು ವ್ಯವಹಾರಗಳು ಟ್ರಂಪ್‌ಗೆ ಸಿಟ್ಟು ತರಿಸಿವೆ. ಅಮೆರಿಕದ ಶೇ.25 ಹೆಚ್ಚುವರಿ ತೆರಿಗೆಯ ಪರಿಣಾಮವನ್ನು ಪರಿಶೀಲಿಸಲಾಗುತ್ತಿದೆ ಮತ್ತು ಅಮೆರಿಕದ ಜೊತೆಗಿನ ವ್ಯಾಪಾರ ಒಪ್ಪಂದದ ಮಾತುಕತೆಗಳು ಮುಂದುವರಿಯುತ್ತಿವೆ ಎಂದು ಭಾರತ ತಿಳಿಸಿದೆ. ಅದೇ ಸಮಯದಲ್ಲಿ, ಟ್ರಂಪ್ ಘೋಷಣೆಯನ್ನು ಭಾರತದಲ್ಲಿ ಅಸ್ತ್ರವನ್ನಾಗಿ ಮಾಡಿಕೊಳ್ಳಲು ವಿರೋಧ ಪಕ್ಷಗಳು ಯತ್ನಿಸುತ್ತಿವೆ.
ಭಾರತದ ರಫ್ತಿನ ಮೇಲಿನ ಅಮೆರಿಕದ ಸುಂಕವು ಕೃಷಿ, ಇಂಧನ, ಜವಳಿ, ಎಲೆಕ್ಟ್ರಾನಿಕ್ಸ್ ವಸ್ತುಗಳು, ರತ್ನಾಭರಣಗಳು ಸೇರಿದಂತೆ ಹಲವಾರು ಪ್ರಮುಖ ಕ್ಷೇತ್ರಗಳ ಮೇಲೆ ಪರಿಣಾಮ ಬೀರಬಹುದು. ಎಲೆಕ್ಟ್ರಾನಿಕ್ಸ್, ಔಷಧಗಳು, ರತ್ನಗಳು ಮತ್ತು ಆಭರಣಗಳು ಅಮೆರಿಕಕ್ಕೆ ಭಾರತದ ಪ್ರಮುಖ ರಫ್ತುಗಳಲ್ಲಿ ಸೇರಿವೆ. ಇಲ್ಲಿಯವರೆಗೆ ವಿನಾಯಿತಿ ಪಡೆದಿದ್ದ ಔಷಧೀಯ ವಲಯವನ್ನು ಸುಂಕದ ವ್ಯಾಪ್ತಿಗೆ ತಂದರೆ, ಅದು ಉದ್ಯಮಕ್ಕೆ ತೀವ್ರ ಹೊಡೆತ ನೀಡಬಹುದು.