IPL | ಕೆಕೆಆರ್ ನಿಂದ ಬಿಗ್ ಆಫರ್: ಡೆಲ್ಲಿ ಕ್ಯಾಪಿಟಲ್ಸ್‌ಗೆ ಕೆ ಎಲ್ ರಾಹುಲ್‌ ಗುಡ್‌ ಬೈ?

ಹೊಸದಿಗಂತ ಡಿಜಿಟಲ್ ಡೆಸ್ಕ್:

2025ರ ಐಪಿಎಲ್‌ ಮುಗಿದು ಮುಂದಿನ ಆವೃತ್ತಿಯ ಐಪಿಎಲ್ ಟೂರ್ನಿಗೆ ಆಟಗಾರರು ಈಗಿನಿಂದಲೇ ಭರ್ಜರಿ ಸಿದ್ದತೆಗಳನ್ನು ಆರಂಭಿಸಿವೆ. ಇದೀಗ 19ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಟ್ರೇಡ್ ವಿಂಡೋ ಓಪನ್ ಆಗಿದೆ. ಇದರಿಂದ ಹಲವು ಸ್ಟಾರ್ ಆಟಗಾರರನ್ನು ತಮ್ಮ ತಂಡಕ್ಕೆ ಸೆಳೆಯಲು ಫ್ರಾಂಚೈಸಿಗಳು ಆಫರ್ ನೀಡಲು ಆರಂಭಿಸಿವೆ.

ಈ ನಡುವೆ ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 14 ಕೋಟಿ ರುಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದ ಕೆ ಎಲ್ ರಾಹುಲ್‌ಗೆ ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿ ಗಾಳ ಹಾಕಿದೆ ಎನ್ನುವ ಸುದ್ದಿ ವೈರಲ್ ಆಗಿದೆ.

ಮೂರು ಬಾರಿಯ ಐಪಿಎಲ್ ಚಾಂಪಿಯನ್‌ ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಡೆಲ್ಲಿ ಕ್ಯಾಪಿಟಲ್ಸ್‌ಗೆ ದೊಡ್ಡ ಆಫರ್ ನೀಡಿದೆ. ಕೆಕೆಆರ್ ಫ್ರಾಂಚೈಸಿಯು ಕೆ ಎಲ್ ರಾಹುಲ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಒಲವು ತೋರಿದೆ. ಮಾಧ್ಯಮ ವರದಿಗಳ ಪ್ರಕಾರ ಕೆ ಎಲ್ ರಾಹುಲ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಕೆಕೆಆರ್ ಫ್ರಾಂಚೈಸಿಯು ಬರೋಬ್ಬರಿ 25 ಕೋಟಿ ರುಪಾಯಿ ನೀಡಲು ರೆಡಿಯಿದೆ. ಟ್ರೇಡ್‌ ವಿಂಡೋದಲ್ಲಿ ಕೇವಲ ಆಟಗಾರರಿಗೆ ಹಣ ನೀಡಿ ತಮ್ಮ ಕಡೆ ಸೆಳೆದುಕೊಳ್ಳಬಹುದು. ಇದಲ್ಲದಿದ್ದರೇ ಆಟಗಾರರ ವಿನಿಮಯವನ್ನು ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಆದರೆ ಯಾವ ಆಟಗಾರರನ್ನು ಡೆಲ್ಲಿಗೆ ನೀಡಿ ಕೆ ಎಲ್ ರಾಹುಲ್ ಅವರನ್ನು ಕೆಕೆಆರ್ ಫ್ರಾಂಚೈಸಿ ತಮ್ಮ ಕಡೆ ಸೆಳೆಯಲು ಮುಂದಾಗಿದೆ ಎನ್ನುವುದಕ್ಕೆ ಸದ್ಯ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ.

2024ರ ಐಪಿಎಲ್ ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಕೋಲ್ಕತಾ ನೈಟ್ ರೈಡರ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆದರೆ ಮರು ವರ್ಷ ಶ್ರೇಯಸ್ ಅಯ್ಯರ್ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ಪಾಲಾಗಿದ್ದರು. ಹೀಗಾಗಿ 2025ರ ಐಪಿಎಲ್‌ನಲ್ಲಿ ಕೆಕೆಆರ್ ಫ್ರಾಂಚೈಸಿಯು ಅಜಿಂಕ್ಯ ರಹಾನೆಗೆ ನಾಯಕ ಪಟ್ಟ ಕಟ್ಟಿತ್ತು. ಆದರೆ ರಹಾನೆ ನೇತೃತ್ವದಲ್ಲಿ ಕೆಕೆಆರ್ ಫ್ರಾಂಚೈಸಿಯು ನೀರಸ ಪ್ರದರ್ಶನ ತೋರುವ ಮೂಲಕ ಲೀಗ್ ಹಂತದಲ್ಲಿಯೇ ಹೊರಬಿದ್ದು ಮುಖಭಂಗ ಅನುಭವಿಸಿತ್ತು. ಹೀಗಾಗಿ ಮುಂಬರುವ ಐಪಿಎಲ್ ಟೂರ್ನಿಗೆ ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಹೊಸ ನಾಯಕ ಹುಡುಕಾಟದಲ್ಲಿದೆ.ಈಗಾಗಲೇ ಪಂಜಾಬ್ ಕಿಂಗ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡಗಳನ್ನು ನಾಯಕನಾಗಿ ಮುನ್ನಡೆಸಿದ ಅನುಭವ ಹೊಂದಿರುವ ಕೆ ಎಲ್ ರಾಹುಲ್‌ ಅವರನ್ನು ಕರೆತಂದು ನಾಯಕತ್ವ ಪಟ್ಟ ಕಟ್ಟಬೇಕೆನ್ನುವುದು ಕೆಕೆಆರ್ ಫ್ರಾಂಚೈಸಿಯ ಲೆಕ್ಕಾಚಾರವಾಗಿದೆ. ಹೀಗಾಗಿ ಶತಾಯಗತಾಯ ಟ್ರೇಡ್ ವಿಂಡೋ ಮೂಲಕ ಕೆ ಎಲ್ ರಾಹುಲ್ ಅವರನ್ನು ಕರೆತರಲು ಕೆಕೆಆರ್ ಫ್ರಾಂಚೈಸಿ ರಣತಂತ್ರ ಹೆಣೆಯುತ್ತಿದೆ ಎಂದು ವರದಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!