ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಆರ್ಥಿಕತೆ ‘ಸತ್ತ ಆರ್ಥಿಕತೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತಿಗೆ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಬೆಂಬಲ ಸೂಚಿಸಿದ್ದಾರೆ.
“ಡೊನಾಲ್ಡ್ ಟ್ರಂಪ್ ಸತ್ಯ ಹೇಳಿದ್ದಕ್ಕೆ ಸಂತೋಷವಾಗಿದೆ. ಭಾರತದ ಪ್ರಧಾನಿ ಮತ್ತು ಹಣಕಾಸು ಸಚಿವರನ್ನು ಹೊರತುಪಡಿಸಿ ಎಲ್ಲರಿಗೂ ಭಾರತದ ಆರ್ಥಿಕತೆಯ ಪರಿಸ್ಥಿತಿ ಹೇಗಿದೆ” ಎಂಬುದರ ವಾಸ್ತವದ ಅರಿವಿದೆ ಎಂದಿದ್ದಾರೆ.
ಭಾರತದ ಮೇಲೆ ಶೇ. 25 ರಷ್ಟು ಸುಂಕ ಮತ್ತು ದಂಡ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ನಂತರ ಹಾಗೂ ಭಾರತ ಮತ್ತು ರಷ್ಯಾವನ್ನು “ಸತ್ತ ಆರ್ಥಿಕತೆಗಳು” ಎಂದು ಕರೆದ ನಂತರ ರಾಹುಲ್ ಗಾಂಧಿ ಅವರ ಈ ಹೇಳಿಕೆಗಳು ಬಂದಿವೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, “ಹೌದು, ಟ್ರಂಪ್ ಹೇಳಿದ್ದು ಸರಿ. ಪ್ರಧಾನಿ ಮತ್ತು ಹಣಕಾಸು ಸಚಿವರನ್ನು ಹೊರತುಪಡಿಸಿ ಎಲ್ಲರಿಗೂ ಇದು ತಿಳಿದಿದೆ. ಭಾರತದ ಆರ್ಥಿಕತೆ ಸತ್ತ ಆರ್ಥಿಕತೆ ಎಂದು ಎಲ್ಲರಿಗೂ ತಿಳಿದಿದೆ. ಅಧ್ಯಕ್ಷ ಟ್ರಂಪ್ ಈ ಸತ್ಯವನ್ನು ಹೇಳಿದ್ದಕ್ಕೆ ನನಗೆ ಸಂತೋಷವಾಗಿದೆ. ಭಾರತದ ಆರ್ಥಿಕತೆ ಸತ್ತ ಆರ್ಥಿಕತೆ ಎಂದು ಇಡೀ ಜಗತ್ತಿಗೆ ತಿಳಿದಿದೆ.” ಎಂದಿದ್ದಾರೆ.
ನಮ್ಮದು ಪ್ರತಿಭಾನ್ವಿತ ವಿದೇಶಾಂಗ ನೀತಿ ಎಂದು ವಿದೇಶಾಂಗ ಸಚಿವರು ಭಾಷಣ ಮಾಡುತ್ತಾರೆ. ಒಂದೆಡೆ, ಅಮೆರಿಕ ನಿಮ್ಮನ್ನು ನಿಂದಿಸುತ್ತಿದೆ, ಮತ್ತೊಂದೆಡೆ, ಚೀನಾ ಬೆನ್ನಟ್ಟುತ್ತಿದೆ. ಮೂರನೆಯದಾಗಿ, ನೀವು ಜಗತ್ತಿನಾದ್ಯಂತ ನಿಯೋಗಗಳನ್ನು ಕಳುಹಿಸಿದಾಗ ಯಾವುದೇ ದೇಶವು ಪಾಕಿಸ್ತಾನವನ್ನು ಖಂಡಿಸಲಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಟ್ರಂಪ್ 30ರಿಂದ 32 ಬಾರಿ ತಾನೇ ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮವನ್ನು ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. 5 ಭಾರತೀಯ ಜೆಟ್‌ಗಳು ಬಿದ್ದಿವೆ ಎಂದು ಅವರು ಹೇಳಿದ್ದಾರೆ. ಟ್ರಂಪ್ ಈಗ 25% ಸುಂಕವನ್ನು ವಿಧಿಸುವುದಾಗಿ ಹೇಳುತ್ತಿದ್ದಾರೆ. ಇದಕ್ಕೆಲ್ಲ ಪ್ರಧಾನಿ ಮೋದಿಗೆ ಉತ್ತರ ನೀಡಲು ಏಕೆ ಸಾಧ್ಯವಾಗುತ್ತಿಲ್ಲ? ನಿಜವಾದ ಕಾರಣವೇನು? ಯಾರ ಕೈಯಲ್ಲಿ ಮೋದಿಯ ನಿಯಂತ್ರಣವಿದೆ?” ಎಂದು ರಾಹುಲ್ ಗಾಂಧಿ ಕೇಳಿದ್ದಾರೆ.