ಹೊಸದಿಗಂತ ಡಿಜಿಟಲ್ ಡೆಸ್ಕ್:
ದಿ ಓವಲ್ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಆರಂಭಿಕ ಹಂತದಲ್ಲೇ ಸಂಕಷ್ಟಕ್ಕೆ ಸಿಲುಕಿದೆ. ಟಾಸ್ ಗೆದ್ದ ಭಾರತ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರೂ, ಆರಂಭದಲ್ಲೇ ಪ್ರಮುಖ ವಿಕೆಟ್ಗಳನ್ನು ಕಳೆದುಕೊಂಡ ಪರಿಣಾಮ ಇಡೀ ಇನ್ನಿಂಗ್ಸ್ ಮೇಲೆ ಅದರ ಪರಿಣಾಮ ಬಿದ್ದಿದೆ.
ಯಶಸ್ವಿ ಜೈಸ್ವಾಲ್ ಕೇವಲ 2 ರನ್ಗಳಿಗೆ ಎಲ್ಬಿಡಬ್ಲ್ಯೂ ಆಗಿ ಔಟಾಗಿದ್ದರೆ, ಕೆಎಲ್ ರಾಹುಲ್ 14 ರನ್ಗಳಿಸಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಆರಂಭಿಕ ಓವರ್ಗಳಲ್ಲಿಯೇ ಭಾರತದ ಟಾಪ್ ಆರ್ಡರ್ ಕುಸಿದಿದ್ದು, ತಂಡದ ಸ್ಥಿತಿ ನಿಜಕ್ಕೂ ಆಘಾತ ತಂದಿದೆ. ಈ ಸಂದರ್ಭದಲ್ಲಿ ಸಾಯಿ ಸುದರ್ಶನ್ ಮತ್ತು ನಾಯಕ ಶುಭ್ಮನ್ ಗಿಲ್ ಕ್ರೀಸ್ಕ್ಕೆ ಬಂದು ಜವಾಬ್ದಾರಿಯಿಂದ ಆಡಿದರೂ, ಮಳೆಯ ಅಡಚಣೆಯಿಂದ ಆಟ ನಿಲ್ಲಿಸಲಾಯಿತು.
ಆಟ ಪುನರಾರಂಭವಾದ ಕೆಲ ಸಮಯದಲ್ಲೇ, ಗಿಲ್ ರನ್ ಔಟ್ ಆಗುವ ಮೂಲಕ ಭಾರತ ಮತ್ತೊಂದು ವಿಕೆಟ್ ಕಳೆದುಕೊಂಡಿತು. ಸಿಂಗ್ಲ್ ರನ್ಗಾಗಿ ಯತ್ನಿಸಿದ ಗಿಲ್, ಜೊತೆಗಾರ ಸುದರ್ಶನ್ ‘ನೋ’ ಎಂದ ನಂತರ ಯು-ಟರ್ನ್ ತೆಗೆದುಕೊಂಡರು. ಆದರೆ ಅಟ್ಕಿನ್ಸನ್ ನೇರವಾಗಿ ಸ್ಟಂಪ್ಗೆ ಎಸೆದು ಅವರನ್ನು ಔಟ್ ಮಾಡಿದರು. ಸುನಿಲ್ ಗವಾಸ್ಕರ್ ಈ ರನ್ ಔಟ್ನನ್ನು ಆತ್ಮಹತ್ಯಾ ರನ್ ಔಟ್ ಎಂದು ಕಿಡಿಕಾರಿದ್ದಾರೆ.
ಅನಂತರ ಕರುಣ್ ನಾಯರ್ ಮತ್ತು ಸಾಯಿ ಸುದರ್ಶನ್ ಆಟವನ್ನು ಮುಂದುವರೆಸಿದರೂ, ಸುದರ್ಶನ್ 38 ರನ್ ಗಳಿಸಿ ಔಟ್ ಆದರು. ಬಳಿಕ ಜಡೇಜಾ 9 ರನ್ಗೆ, ಜುರೆಲ್ 19 ರನ್ಗೆ ಔಟ್ ಆದರು. ಪ್ರಸ್ತುತ ಕರುಣ್ ನಾಯರ್ ಅಜೇಯ 40 ರನ್ ಗಳಿಸಿ ಆಟವಾಡುತ್ತಿದ್ದಾರೆ. ಅವರಿಗೆ ವಾಷಿಂಗ್ಟನ್ ಸುಂದರ್ 6 ರನ್ಗಳೊಂದಿಗೆ ಜೊತೆ ನೀಡುತ್ತಿದ್ದಾರೆ. ಮೊದಲ ದಿನದ ಆಟದ ಸ್ಥಿತಿಯಿಂದಾಗಿ ಭಾರತ ಈಗಾಗಲೇ ಒಂದು ಹೆಜ್ಜೆ ಹಿಂದಿದೆ ಎನ್ನಬಹುದು.