ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿಶ್ಚಿತ್ ಎಂಬ ಬಾಲಕನ ಅಪಹರಿಸಿ ಬನ್ನೇರುಘಟ್ಟ ಸಮೀಪ ಕೊಲೆ ಮಾಡಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಾದ ಗುರುಮೂರ್ತಿ ಮತ್ತು ಗೋಪಾಲಕೃಷ್ಣ ಅವರ ಕಾಲಿಗೆ ಗುಂಡು ಹಾರಿಸಿ ಅವರನ್ನು ಬಂಧಿಸುವಲ್ಲಿ ಪೊಲಿಸರು ಯಶಸ್ವಿಯಾಗಿದ್ದಾರೆ. ಪೊಲೀಸ್ ಕಾರ್ಯಾಚರಣೆ ವೇಳೆ ಬನ್ನೇರುಘಟ್ಟ ಠಾಣಾ ವ್ಯಾಪ್ತಿಯ ಕಗ್ಗಲಿಪುರ ರಸ್ತೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳಾದ ಗುರುಮೂರ್ತಿ ಮತ್ತು ಗೋಪಾಲಕೃಷ್ಣ ಕುರಿತು ದೊರೆತ ಖಚಿತ ಮಾಹಿತಿ ಮೇರೆಗೆ ಬನ್ನೇರುಘಟ್ಟ ಪೊಲೀಸರು ಸ್ಥಳಕ್ಕೆ ತೆರಳಿದ್ದರು. ಆ ಸಂದರ್ಭದಲ್ಲಿ, ಆರೋಪಿಗಳು ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದ್ದಾರೆ. ಆಗ, ಹುಳಿಮಾವು ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಕುಮಾರಸ್ವಾಮಿ ಮತ್ತು ಪಿಎಸ್ಐ ಅರವಿಂದ ಕುಮಾರ್ ಆರೋಪಿಗಳ ಮೇಳೆ ಗುಂಡಿನ ದಾಳಿ ನಡೆಸಿದ್ದಾರೆ. ಪೊಲೀಸರು ಆತ್ಮರಕ್ಷಣೆಗಾಗಿ ಒಟ್ಟಾರೆ 6 ಸುತ್ತು ಗುಂಡು ಹಾರಿಸಿದ್ದಾರೆ.
ಸದ್ಯ ಬಂಧಿತ ಆರೋಪಿಗಳನ್ನು ಜಯನಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹುಳಿಮಾವು ಠಾಣೆಯಲ್ಲಿ ನಿಶ್ಚಿತ್ ಅಪಹರಣ ಪ್ರಕರಣ ದಾಖಲಾಗಿತ್ತು. ಆರೋಪಿಗಳು ಸೈಕೋ ಮನಸ್ಥಿತಿ ಹೊಂದಿದವರು ಎನ್ನಲಾಗಿದೆ. ಪ್ರಮುಖ ಆರೋಪಿ ಗುರುಮೂರ್ತಿಗೆ ಪೋಕ್ಸೊ ಅಪರಾಧ ಪ್ರಕರಣದ ಹಿನ್ನೆಲೆ ಇದೆ. ಆದಾಗ್ಯೂ, ಬಾಲಕ ನಿಶ್ಚಿತ್ ಅಪಹರಣ ಹಾಗೂ ಕೊಲೆಗೆ ನಿಖರ ಕಾರಣ ಏನೆಂಬುದು ಇನ್ನೂ ನಿಗೂಢವಾಗಿಯೇ ಇದೆ.