ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ವೇಗಿಗಳ ಪ್ರಚಂಡ ದಾಳಿಗೆ ತತ್ತರಿಸಿದ ಇಂಗ್ಲೆಂಡ್, 5ನೇ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 247 ರನ್‌ಗಳಿಗೆ ಆಲೌಟ್ ಆಗಿ ಭಾರತಕ್ಕೆ ಮತ್ತೆ ಹೋರಾಟದ ಅವಕಾಶ ನೀಡಿದೆ. ಮೊದಲ ವಿಕೆಟ್‌ಗೆ ಉತ್ತಮ ಆರಂಭ ನೀಡಿದ್ದ ಇಂಗ್ಲೆಂಡ್ ತಂಡ ಮಧ್ಯಮ ಕ್ರಮಾಂಕದಲ್ಲಿ ಭಾರಿ ಕುಸಿತಕ್ಕೆ ಒಳಗಾಯಿತು.
ಟಾಸ್ ಗೆದ್ದ ಇಂಗ್ಲೆಂಡ್, ಮೊದಲ ಇನ್ನಿಂಗ್ಸ್‌ನಲ್ಲಿ ಜ್ಯಾಕ್ ಕ್ರಾಲಿ (64), ಹ್ಯಾರಿ ಬ್ರೂಕ್ (53) ಹಾಗೂ ಬೆನ್ ಡಕೆಟ್ (43) ಬ್ಯಾಟಿಂಗ್ ಹೊಣೆ ಹೊತ್ತರು. ಕ್ರಾಲಿ ಮತ್ತು ಡಕೆಟ್ ಸ್ಫೋಟಕ ಆಟವಾಡುತ್ತಾ ಕೇವಲ 78 ಎಸೆತಗಳಲ್ಲಿ 92 ರನ್‌ಗಳ ಮೊದಲ ವಿಕೆಟ್ ಜೊತೆಯಾಟ ನೀಡಿದರು. ಆದರೆ ಆಕಾಶ್ ದೀಪ್ ಡಕೆಟ್‌ನ್ನು ಕೀಪರ್ ಜುರೆಲ್ ಮೂಲಕ ಔಟ್ ಮಾಡಿ ಈ ಅಪಾಯಕಾರ ಜೋಡಿಯನ್ನು ಬೇರ್ಪಡಿಸಿದರು.
ನಂತರ ನಾಯಕ ಒಲ್ಲಿ ಪೋಪ್ (22) ಹಾಗೂ ಕ್ರಾಲಿ ನಡುವೆ 37 ರನ್‌ಗಳ 2ನೇ ವಿಕೆಟ್ ಜೊತೆಯಾಟವಾಯಿತು. ಪ್ರಸಿಧ್ ಕೃಷ್ಣದ ದಾಳಿಗೆ ಕ್ರಾಲಿ ಆಡುವ ಪ್ರಯತ್ನದಲ್ಲಿ ವಿಕೆಟ್ ಒಪ್ಪಿಸಿದರು. ಹೀಗೆ ಆರಂಭದ ಭರ್ಜರಿ ಆಟದ ನಂತರ ಇಂಗ್ಲಿಷ್ ಇನಿಂಗ್ಸ್ ಕುಸಿತದ ದಾರಿಗೆ ತಿರುಗಿತು.
ಟಾಪ್ ಬ್ಯಾಟರ್ ಜೋ ರೂಟ್ 29 ರನ್ ಗಳಿಸಿ ಸಿರಾಜ್ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂ ಆದರು. ಹ್ಯಾರಿ ಬ್ರೂಕ್ ಏಕಾಂಗಿಯಾಗಿ ಹೋರಾಡುತ್ತಾ 64 ಎಸೆತಗಳಲ್ಲಿ 53 ರನ್ ಗಳಿಸಿ ಇನ್ನಿಂಗ್ಸ್‌ನ 2ನೇ ಗರಿಷ್ಠ ಸ್ಕೋರ್‌ರ್ಸ್ ಎನಿಸಿಕೊಂಡರು. ಆದರೆ ಉಳಿದ ಬ್ಯಾಟರ್‌ಗಳಿಂದ ಯಾವುದೇ ಸಹಕಾರ ಸಿಗದ ಕಾರಣ ಇಂಗ್ಲೆಂಡ್ ನಿರೀಕ್ಷಿತ ಮೊತ್ತವನ್ನೂ ತಲುಪಲಿಲ್ಲ.
ಜೇಮಿ ಸ್ಮಿತ್ (8), ಜಾಕೋಬ್ ಬೆಥೆಲ್ (6) ಹಾಗೂ ಗಸ್ ಅಟ್ಕಿನ್ಸನ್ (11) ಪೆವಿಲಿಯನ್ ಸೇರಿದರು. ಜೇಮಿ ಓವರ್ಟನ್ ಖಾತೆ ತೆರೆಯದೇ ವಾಪಸಾದರು. ಭಾರತ ಪರ ಮೊಹಮ್ಮದ್ ಸಿರಾಜ್ (86ಕ್ಕೆ 4) ಹಾಗೂ ಪ್ರಸಿಧ್ ಕೃಷ್ಣ (62ಕ್ಕೆ 4) ವೇಗದ ಬೌಲಿಂಗ್ ಮೂಲಕ ಇಂಗ್ಲೆಂಡನ್ನು ನಡುಗಿಸಿದರು. ಆಕಾಶ್ ದೀಪ್ ಒಂದಿಷ್ಟು ಹೊಣೆ ಹೊತ್ತು 1 ವಿಕೆಟ್ ಪಡೆದರು.
ಒಟ್ಟಿನಲ್ಲಿ ಬಾತ್‌ನ ಪಿಚ್ ಬೌಲಿಂಗ್‌ಗಿಂತ ಬ್ಯಾಟಿಂಗ್‌ಗೆ ಅನುಕೂಲವಾಗಿದ್ದರೂ, ಭಾರತ ತಂಡದ ಶಿಸ್ತುಬದ್ಧ ಬೌಲಿಂಗ್ ದಾಳಿಯ ಮುಂದೆ ಇಂಗ್ಲೆಂಡ್ ಬಾಝ್‌ಬಾಲ್ ತಂತ್ರ ಯಶಸ್ವಿಯಾಗಲಿಲ್ಲ. ಆರಂಭದ ವೇಗವನ್ನು ಇನ್ನಿಂಗ್ಸ್‌ನ ಉಳಿದ ಭಾಗದಲ್ಲಿ ಉಳಿಸಿಕೊಳ್ಳಲು ಇಂಗ್ಲೆಂಡ್ ತಂಡ ಸಂಪೂರ್ಣ ವಿಫಲವಾಯಿತು.