ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ಲಾಮಾಬಾದ್ ಎಕ್ಸ್‌ಪ್ರೆಸ್‌ನ 10 ಭೋಗಿಗಳು ಹಳಿತಪ್ಪಿರುವ ಘಟನೆ ಶೇಖುಪುರ ಜಿಲ್ಲೆಯ ಕಲಾ ಶಾ ಕಾಕು ಎಂಬಲ್ಲಿ ನಡೆದಿದೆ.
ಶುಕ್ರವಾರ ಸಂಜೆ ಲಾಹೋರ್ ರೈಲು ನಿಲ್ದಾಣದಿಂದ ಹೊರಟ ಇಸ್ಲಾಮಾಬಾದ್ ಎಕ್ಸ್‌ಪ್ರೆಸ್ ಸುಮಾರು ಅರ್ಧ ಗಂಟೆಯ ಬಳಿಕ ಹಳಿತಪ್ಪಿದೆ. ಪರಿಣಾಮ ರೈಲಿನಲ್ಲಿದ್ದ 30 ಪ್ರಯಾಣಿಕರು ಗಾಯಗೊಂಡಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ.
ಈ ಕುರಿತು ಪಾಕಿಸ್ತಾನ ರೈಲ್ವೆ ಮಾಹಿತಿ ಹಂಚಿಕೊಂಡಿದ್ದು, ಅವಘಡ ಸಂಭವಿಸಿದ ಕೆಲವೇ ಕ್ಷಣಗಳಲ್ಲಿ ಸ್ಥಳಕ್ಕೆ ರಕ್ಷಣಾ ತಂಡಗಳು ಧಾವಿಸಿದ್ದು, ಕಾರ್ಯಾಚರಣೆ ನಡೆಸಿವೆ. ಭೋಗಿಗಳ ಒಳಗೆ ಸಿಲುಕಿದ್ದ ಪ್ರಯಾಣಿಕರನ್ನು ರಕ್ಷಿಸಲು ಸಿಬ್ಬಂದಿ ರಾತ್ರಿಯಿಡಿ ಕಾರ್ಯನಿರ್ವಹಿಸಿದ್ದಾರೆ ಎಂದು ತಿಳಿಸಿದೆ. ಅವಘಡದಲ್ಲಿ 1,000ಕ್ಕೂ ಅಧಿಕ ಪ್ರಯಾಣಿಕರನ್ನು ರಕ್ಷಿಸಲಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈವರೆಗೆ ಯಾವುದೇ ಸಾವು ಸಂಭವಿಸಿಲ್ಲ ಎಂದು ವರದಿ ಮಾಡಿದೆ.