ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಲಯಾಳಂ ಚಿತ್ರರಂಗದ ಖ್ಯಾತ ನಟ, ಮಿಮಿಕ್ರಿ ಕಲಾವಿದ ಮತ್ತು ಹಿನ್ನೆಲೆ ಗಾಯಕ ಕಲಾಭವನ್ ನವಾಸ್ (51) ಅವರು ಶುಕ್ರವಾರ ಸಂಜೆ ಕೊಚ್ಚಿಯ ಚೊಟ್ಟನಿಕ್ಕರೆಯಲ್ಲಿರುವ ಹೋಟೆಲ್ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ಸುದ್ದಿಯಿಂದ ಮಲಯಾಳಂ ಚಿತ್ರರಂಗದಲ್ಲಿ ಶೋಕದ ಛಾಯೆ ಆವರಿಸಿದೆ.
‘ಪ್ರಕಂಬನಂ’ ಚಿತ್ರದ ಚಿತ್ರೀಕರಣಕ್ಕಾಗಿ ನವಾಸ್ ಅವರು ಹೋಟೆಲ್ನಲ್ಲಿ ತಂಗಿದ್ದರು. ಶುಕ್ರವಾರ ಸಂಜೆ, ಅವರು ಚೆಕ್-ಔಟ್ಗೆ ಬಾರದ ಹಿನ್ನೆಲೆ ಸಿಬ್ಬಂದಿ ಅವರ ಕೊಠಡಿಯನ್ನು ಪರಿಶೀಲಿಸಿದಾಗ, ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು. ಪ್ರಾಥಮಿಕ ಮಾಹಿತಿ ಪ್ರಕಾರ ಹೃದಯಾಘಾತವೇ ಸಾವಿಗೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.
ಅವರ ಕೊಠಡಿಯಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತದೇಹವನ್ನು ಪ್ರಸ್ತುತ ಎಸ್ಡಿ ಟಾಟಾ ಆಸ್ಪತ್ರೆಗೆ ಸಾಗಿಸಲಾಗಿದ್ದು, ಇಂದು ಮರಣೋತ್ತರ ಪರೀಕ್ಷೆ ನಡೆಯಲಿದೆ. ನಂತರ ಕುಟುಂಬಕ್ಕೆ ಮೃತದೇಹ ಹಸ್ತಾಂತರಿಸಲಾಗುವುದು.
1995ರಲ್ಲಿ ‘ಚೈತನ್ಯಂ’ ಚಿತ್ರದ ಮೂಲಕ ಸಿನಿ ಪ್ರವೇಶ ಮಾಡಿದ್ದ ಕಲಾಭವನ್ ನವಾಸ್ ಅವರು, ‘ಮಿಮಿಕ್ಸ್ ಆಕ್ಷನ್ 500’, ‘ಹಿಟ್ಲರ್ ಬ್ರದರ್ಸ್’, ‘ಜೂನಿಯರ್ ಮಾಂಡ್ರೇಕ್’, ‘ಅಮ್ಮ ಅಮ್ಮಯ್ಯಮ್ಮ’, ‘ಚಂದಮಾಮ’ ಮತ್ತು ‘ತಿಲ್ಲಾನ ತಿಲ್ಲಾನ’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ, ಮಿಮಿಕ್ರಿ ಪ್ರತಿಭೆ ಮತ್ತು ಹಿನ್ನೆಲೆ ಗಾಯನದಿಂದ ಅಪಾರ ಪ್ರೇಕ್ಷಕರನ್ನು ಮೆಚ್ಚಿಸಿಕೊಂಡಿದ್ದರು.