ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ-ನಿರ್ದೇಶಕ ರಾಜ್ ಬಿ. ಶೆಟ್ಟಿ ಅವರ ‘ಸು ಫ್ರಮ್ ಸೋ’ ಸಿನಿಮಾ ಎರಡನೇ ವಾರದಲ್ಲೂ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರದ ಪ್ರದರ್ಶನ ನೀಡುತ್ತಿದೆ. ದೇಶದಾದ್ಯಾಂತ ಬಿಡುಗಡೆಗೊಂಡಿರುವ ಈ ಚಿತ್ರ, ಅಭಿಮಾನಿಗಳಿಂದ ಭರ್ಜರಿ ಸ್ಪಂದನೆ ಪಡೆಯುತ್ತಿದ್ದು, ವೀಕ್ಷಕರನ್ನು ಕನ್ನಡ ಸಿನಿಮಾದತ್ತ ಸೆಳೆಯುತ್ತಿದೆ.
ಇದೇ ಮೊದಲ ಬಾರಿಗೆ ಒಂದು ಸಿನಿಮಾ ಎರಡನೇ ವಾರವೂ ಈ ಮಟ್ಟದ ಹೌಸ್‌ಫುಲ್ ಪ್ರದರ್ಶನ ನೀಡುತ್ತಿರುವುದು ಚಿತ್ರರಂಗದಲ್ಲಿ ಆಶ್ಚರ್ಯ ಹುಟ್ಟಿಸಿದೆ. ವೀಕೆಂಡ್‌ಗಳಲ್ಲಿ ಚಿತ್ರಮಂದಿರಗಳ ಮುಂದೆ ಟಿಕೆಟ್ ಪಡೆಯಲು ಜನ ಮುಗಿಬೀಳುತ್ತಿರುವ ದೃಶ್ಯ ಎಲ್ಲೆಂದರಲ್ಲಿ ಕಾಣಿಸುತ್ತಿದೆ. ಬಾಯಿಮಾತಿನ ಪ್ರಚಾರದಿಂದಲೇ ಈ ಸಿನಿಮಾ ಯಶಸ್ಸಿನ ಶಿಖರಕ್ಕೆ ಏರಿರುವುದು ವಿಶಿಷ್ಟ.
ಆಗಸ್ಟ್ 1ರಂದು ‘ಸು ಫ್ರಮ್ ಸೋ’ ಸಿನಿಮಾದ ಟಿಕೆಟ್‌ಗಳು ಒಂದು ಗಂಟೆಯಲ್ಲಿ ಸುಮಾರು 11 ಸಾವಿರದಷ್ಟು ಮಾರಾಟವಾದವು. ಈ ಮೂಲಕ ಸುದೀಪ್ ಅಭಿನಯದ ‘ಮ್ಯಾಕ್ಸ್’ ಸಿನಿಮಾದ ಗಂಟೆಗೆ 9 ಸಾವಿರ ಟಿಕೆಟ್ ಮಾರಾಟದ ದಾಖಲೆ ಮುರಿದಿದೆ. ಒಂದೇ ದಿನದಲ್ಲಿ 1.67 ಲಕ್ಷಕ್ಕೂ ಹೆಚ್ಚು ಟಿಕೆಟ್ ಮಾರಾಟವಾಗಿದ್ದು, ಈ ದಾಖಲೆ ಫ್ಯಾನ್ ಪೇಜ್‌ಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.
ಚಿತ್ರದ ವೀಕೆಂಡ್ ಕಲೆಕ್ಷನ್ ಕೂಡ ಗಮನಸೆಳೆಯುವಂತಿದೆ. ಕಳೆದ ಶುಕ್ರವಾರದಂದು ಚಿತ್ರವು 3.76 ಕೋಟಿ ರೂ. ಗಳಿಕೆ ಮಾಡಿದ್ದು, ಒಟ್ಟು ಕಲೆಕ್ಷನ್ ಈಗಾಗಲೇ 23 ಕೋಟಿ ರೂ. ತಲುಪಿದೆ. ಮಲಯಾಳಂನಲ್ಲಿ ಬಿಡುಗಡೆಗೊಂಡಿರುವ ಈ ಚಿತ್ರ ಅಲ್ಲಿಯೂ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.
‘ಸು ಫ್ರಮ್ ಸೋ’ಗೆ ಜೆಪಿ ತುಮಿನಾಡ್ ನಿರ್ದೇಶನ ನೀಡಿದ್ದಾರೆ. ರಾಜ್ ಬಿ. ಶೆಟ್ಟಿ, ಶನೀಲ್ ಗೌತಮ್, ಪ್ರಕಾಶ್ ತುಮಿನಾಡ್, ದೀಪಕ್ ರೈ ಪಣಜೆ, ಮೈಮ್ ರಾಮದಾಸ್ ಮತ್ತು ಸಂಧ್ಯಾ ಅರಕೆರೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.