ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರೀ ಕುತೂಹಲ ಕೆರಳಿಸಿರುವ ಧರ್ಮಸ್ಥಳ ಆಸುಪಾಸಿನಲ್ಲಿ ನೂರಾರು ಶವಗಳನ್ನು ಹೂತಿಡಲಾಗಿದೆ ಎಂಬ ಅನಾಮಿಕನ ದೂರಿನ ಹಿನ್ನೆಲೆಯಲ್ಲಿ ನಡೆಯುತ್ತಿರುವ ಎಸ್ ಐಟಿ ತನಿಖೆ ಇನ್ನಷ್ಟು ಚುರುಕುಗೊಂಡಿದ್ದು, ಇಂದು ಸಮಾಧಿ ಶೋಧ ಪ್ರಕ್ರಿಯೆ ಆರನೇ ದಿನಕ್ಕೆ ಕಾಲಿಟ್ಟಿದೆ.
ಶನಿವಾರ ಪಾಯಿಂಟ್ ನಂ.9 ರಲ್ಲಿ ಸಮಾಧಿ ಶೋಧಕ್ಕೆ ಅಧಿಕಾರಿಗಳು ಸರ್ವ ಸಿದ್ಧತೆ ನಡೆಸಿದ್ದಾರೆ. ರಸ್ತೆ ಸಮೀಪದಲ್ಲಿಯೇ ಇರುವ ಈ ಪಾಯಿಂಟ್ ಬಹಳಷ್ಟು ಕುತೂಹಲ ಕೆರಳಿಸಿರುವ ಜೊತೆಗೇ ಎಸ್ ಐಟಿ ತಂಡಕ್ಕೂ ಇಲ್ಲಿ ಶೋಧ ಕಾರ್ಯ ಹೆಚ್ಚು ಸವಾಲನ್ನು ನೀಡಿದೆ.
ಈ ಪಾಯಿಂಟ್ ಮೇಲೆ ಅನಾಮಿಕ ದೂರುದಾರ ಅತೀ ಹೆಚ್ಚು ವಿಶ್ವಾಸ ಹೊಂದಿರುವ ಹಿನ್ನೆಲೆಯಲ್ಲಿ ಇಲ್ಲಿ ನಿಗೂಢ ರಹಸ್ಯಗಳೇನಾದರೂ ಬೆಳಕಿಗೆ ಬರುತ್ತಾ ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆ.
ದೂರುದಾರನ ಸಹಿತ ಅಧಿಕಾರಿಗಳ ತಂಡ ಈಗ ಸ್ಥಳಕ್ಕೆ ತೆರಳುತ್ತಿದ್ದು, ಈ ಹಿಂದಿನಂತೆ ಮಾನವ ಶ್ರಮ ಹಾಗೂ ಮಿನಿ ಹಿಟಾಚಿ ಯಂತ್ರದ ನೆರವಿನಲ್ಲಿ ಸಮಾಧಿ ಅಗೆಯುವ ಕಾರ್ಯ ನಡೆಯುವ ಸಾಧ್ಯತೆ ಕಂಡುಬಂದಿದೆ.