ತೂಕ ಕಡಿಮೆ ಮಾಡುವ ಸಲುವಾಗಿ ಹಲವರು ಉಪವಾಸ ಅಥವಾ ರಾತ್ರಿಯ ಊಟ ಬಿಟ್ಟುಬಿಡುವಂತಹದ್ದು ಮಾಡ್ತಾರೆ. ಆದರೆ ಈ ವಿಧಾನಗಳು ದೀರ್ಘಾವಧಿಯಲ್ಲಿ ಆರೋಗ್ಯಕ್ಕೆ ಉಪಕಾರಿಯಾಗದೆ, ತೂಕ ಇಳಿಯುವ ಪ್ರಕ್ರಿಯೆಯನ್ನೇ ನಿಧಾನಗೊಳಿಸಬಹುದು ಎಂದು ಪೌಷ್ಟಿಕ ತಜ್ಞರು ಎಚ್ಚರಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ತೂಕವನ್ನು ನೈಸರ್ಗಿಕವಾಗಿ ಮತ್ತು ಸಮರ್ಪಕವಾಗಿ ಇಳಿಸಲು ಅನುಸರಿಸಬಹುದಾದ 5 ಪ್ರಮುಖ ಆಹಾರ ನಿಯಮಗಳಿವೆ.
ಊಟವನ್ನು ಬಿಡಬೇಡಿ
ತೂಕ ಕಡಿಮೆ ಮಾಡಬೇಕು ಎಂಬ ಉದ್ದೇಶದಿಂದ ಕೆಲವರು ಊಟವೇ ಬಿಟ್ಟುಬಿಡುತ್ತಾರೆ. ಆದರೆ ಈ ಕ್ರಮ ಹಸಿವನ್ನು ಹೆಚ್ಚಿಸಿ, ಮುಂದಿನ ಊಟದ ವೇಳೆ ಹೆಚ್ಚು ತಿನ್ನುವ ಪ್ರವೃತ್ತಿಗೆ ಕಾರಣವಾಗಬಹುದು. ಇದು ದೇಹದಲ್ಲಿ ಕೊಬ್ಬನ್ನು ಸಂಗ್ರಹಿಸಲು ದಾರಿ ಮಾಡಿಕೊಡುತ್ತದೆ. ಪ್ರತಿದಿನದ ಮೂರೂ ಹೊತ್ತು ತಿಂದರೂ, ಸಮತೋಲನದ ಆಹಾರವೇ ಮುಖ್ಯ.
ಮಧ್ಯಂತರದಲ್ಲಿ ಲಘು ತಿಂಡಿಗಳು
ಬೆಳಿಗ್ಗೆ ಮತ್ತು ಮಧ್ಯಾಹ್ನ ಅಥವಾ ಸಂಜೆ ಮಧ್ಯೆ ಲಘು, ಪೌಷ್ಟಿಕ ತಿಂಡಿಗಳನ್ನು ತೆಗೆದುಕೊಳ್ಳುವುದು ಅತಿಯಾಗಿ ತಿನ್ನುವ ಪ್ರವೃತ್ತಿಯನ್ನು ನಿಯಂತ್ರಿಸುತ್ತದೆ. ಬಾದಾಮಿ, ಹಣ್ಣು, ಸ್ಯಾಲಡ್ ಹೀಗೆ ಆರೋಗ್ಯಕರ ಆಯ್ಕೆಗಳು ಉತ್ತಮ.
ತಿನ್ನುವಾಗ ಫೋನ್ ಅಥವಾ ಟಿವಿಗೆ ಅಟೆನ್ಷನ್ ಬೇಡ
ತಿಂದುಕೊಂಡು ಟಿವಿ ನೋಡುವುದು ಅಥವಾ ಮೊಬೈಲ್ ಬಳಕೆ ಮಾಡುವುದರಿಂದ ಎಷ್ಟು ತಿಂದೀವೆ ಎಂಬ ಅರಿವು ಇರುವುದಿಲ್ಲ. ಇದರಿಂದ ಹೆಚ್ಚುವರಿ ಆಹಾರ ಸೇವನೆಯ ಸಂಭವವಾಯಿರುತ್ತದೆ. ತಿನ್ನುವಾಗ ಪೂರ್ಣ ಗಮನ ಆಹಾರಕ್ಕೆ ಇರಲಿ.
ರಾತ್ರಿ ಲಘು ಆಹಾರ ತಿನ್ನಿ
ರಾತ್ರಿಯ ಹೊತ್ತಿಗೆ ದೇಹದ ಚಯಾಪಚಯ ಚಟುವಟಿಕೆ ನಿಧಾನವಾಗುತ್ತದೆ. ಇಂಥ ಸಮಯದಲ್ಲಿ ಹೆಚ್ಚು ತಿನ್ನುವುದರಿಂದ ಜೀರ್ಣಕ್ರಿಯೆ ತೊಂದರೆಗೊಳಗಾಗಬಹುದು. ಹೀಗಾಗಿ, ರಾತ್ರಿ ಊಟ ಲಘುವಾಗಿರಲಿ.
ಅತಿಯಾಗಿ ತಿನ್ನುವುದನ್ನು ತಪ್ಪಿಸಿ
ತಿಂಡಿಗೆ ಗ್ಯಾಪ್ ಕೊಟ್ಟ ನಂತರ ಅಥವಾ ಉಪವಾಸದಿಂದ ಮೇಲೆ ಬಂದ ತಕ್ಷಣ ಹದಮೀರಿ ತಿನ್ನಬೇಡಿ. ಕಡಿಮೆ ಕ್ಯಾಲೊರಿಯುಳ್ಳ ಆಹಾರವನ್ನು ಆಯ್ಕೆ ಮಾಡಿ. ಹೀಗೆ ಮಾಡುವುದರಿಂದ ತೂಕ ಇಳಿಕೆ ಸುಗಮವಾಗುತ್ತದೆ ಮತ್ತು ಆರೋಗ್ಯ ಸಹ ಸುಧಾರಿಸುತ್ತದೆ.
ತೂಕ ಕಡಿಮೆ ಮಾಡುವುದು ವೇಗದ ಓಟವಲ್ಲ, ಶಿಸ್ತು ಮತ್ತು ತಾಳ್ಮೆಯ ಆಟ. ಸರಿಯಾದ ಆಹಾರ ಪಥವನ್ನು ಅನುಸರಿಸಿ ದೀರ್ಘಕಾಲಿಕ ಫಲಿತಾಂಶ ಗಳಿಸಬಹುದು.